
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಸೇನಾ ವಾಹನ ಶನಿವಾರ(ಜ4) ದುರಂತಕ್ಕೀಡಾಗಿದ್ದು, 4 ಯೋಧರು ಹುತಾತ್ಮರಾಗಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಂಡಿಪೋರ್ ನ ಸದರ್ ಕೂಟ್ ಪಯೆನ್ ಪ್ರದೇಶದ ಬಳಿ ತೀಕ್ಷ್ಣವಾದ ತಿರುವಿನಲ್ಲಿ ಸೇನಾ ಟ್ರಕ್ ನಿಯಂತ್ರಣ ತಪ್ಪಿ ಗುಡ್ಡದಿಂದ ಉರುಳಿದ ಪರಿಣಾಮ ನಾಲ್ವರು ಯೋಧರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ನಂತರ ಗಾಯಗೊಂಡ ಎಲ್ಲಾ ಸೈನಿಕರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಅವರಲ್ಲಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮೂವರು ಗಾಯಾಳುಗಳ ಸ್ಥಿತಿ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
2024, ಡಿಸೆಂಬರ್ 24 ರಂದು, ಪೂಂಚ್ ನಲ್ಲಿ ಸೇನಾ ವಾಹನ 350 ಅಡಿ ಆಳದ ಕಮರಿಗೆ ಉರುಳಿದ ನಂತರ ಐವರು ಯೋಧರು ಸಾವನ್ನಪ್ಪಿ, ಐವರು ಗಾಯಗೊಂಡರು. ಘಟನೆಯಲ್ಲಿ ಯಾವುದೇ ಉಗ್ರರ ಪಾತ್ರದ ಕೋನವನ್ನು ಸೇನೆ ತಳ್ಳಿಹಾಕಿದೆ.