ಕಡಬ: ಸತತ ಮೂರು ದಿನಗಳ ಕಾರ್ಯಾಚರಣೆ ಬಳಿಕ ಕಡಬದಲ್ಲಿ ಯುವತಿ ಸಹಿತ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.ಕಡಬ ಬಳಿಯ ಮುಜೂರು ರಕ್ಷಿತಾರಣ್ಯದ ಕೊಂಬಾರು ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಲಾಯಿತು. ಬಳಿಕ ಗನ್ ಬಳಸಿ ಅರಿವಳಿಕೆ ಚುಚ್ಚು ಮದ್ದು ನೀಡಲಾಯಿತು. ಅರಿವಳಿಕೆಯನ್ನು ಗನ್ ಶೂಟ್ ಮಾಡುವ ಮೂಲಕ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲದಲ್ಲಿ ಫೆಬ್ರವರಿ 20ರಂದು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಸ್ಥಳೀಯ ಯುವತಿ ರಂಜಿತಾ (21) ಅವರ ಮೇಲೆ ಆನೆ ದಾಳಿ ನಡೆಸಿ ಮೃತಪಟ್ಟಿದ್ದರು. ಅವರನ್ನು ರಕ್ಷಿಸಲೆಂದು ಹೋಗಿದ್ದ ಸ್ಥಳೀಯರಾದ ರಮೇಶ್ ರೈ (52) ಅವರೂ ಆನೆ ದಾಳಿಗೆ ಬಲಿಯಾಗಿದ್ದರು. ಘಟನೆ ಬೆನ್ನಲ್ಲೇ ಆನೆಗಳ ಉಪಟಳದಿಂದ ಮುಕ್ತಿ ಕರುಣಿಸುವಂತೆ ಸ್ಥಳೀಯರಿಂದ ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆಗೆ ಆಗ್ರಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಘಟನೆಯ ಮರುದಿನದಿಂದಲೇ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭಗೊಂಡಿತ್ತು.
ಕಾಡಾನೆಗಳ ಸೆರೆಗಾಗಿ ದುಬಾರೆಯಿಂದ ಐದು ಸಾಕಾನೆಗಳನ್ನು ಕಡಬಕ್ಕೆ ತರಲಾಗಿತ್ತು. ಅಲ್ಲದೆ ಡ್ರೋನ್ ಗಳನ್ನೂ ಬಳಸಿ ಆನೆ ಪತ್ತೆ ಕಾರ್ಯಾಚರಣೆ ನಡೆದಿತ್ತು. ಬುಧವಾರ ಆನೆ ಪತ್ತೆಯಾಗಿತ್ತಾದರೂ ಅರೆವಳಿಕೆ ನೀಡಲು ಪ್ರಯತ್ನಿಸುವ ವೇಳೆ ತಪ್ಪಿಸಿಕೊಂಡಿತ್ತು. ಇದೀಗ ಇಂದು ಸಂಜೆ ಆನೆಯನ್ನು ಪತ್ತೆ ಹಚ್ಚಿ ಅರಿವಳಿಕೆಯನ್ನು ಗನ್ ಶೂಟ್ ಮಾಡುವ ಮೂಲಕ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.