ಮತ್ತೆ ಕೊರೋನಾ ಸದ್ದು ನಾಳೆ CM ನೇತೃತ್ವದಲ್ಲಿ ತುರ್ತು ಸಭೆ

ಬೆಂಗಳೂರು: ಕರ್ನಾಟಕದಲ್ಲಿಯೂ ಕೋವಿಡ್ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ನಾಳೆ (ಡಿ.22)ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಈಗಾಗಲೇ ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಚೀನಾ, ಜಪಾನ್, ಅಮೆರಿಕ, ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೊನಾ ಅಟ್ಟಹಾಸ ಮತ್ತೆ ಆರಂಭವಾಗಿದ್ದು, ಭಾರತದಲ್ಲಿಯೂ ಕಟ್ಟೆಚ್ಚರಕ್ಕೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರ ಕಟ್ಟೆಚ್ಚರಕ್ಕೆ ಸೂಚಿಸಿದ್ದು, ರಾಜ್ಯದಲ್ಲಿಯೂ ಅಲರ್ಟ್ ಆಗುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. 3ನೇ ಡೋಸ್ ಲಸಿಕೆ ಹಾಕಿಸಿಕೊಳ್ಳದವರು ತಕ್ಷಣ ಲಸಿಕೆ ಪಡೆದುಕೊಳ್ಳಿ. ಮಕ್ಕಳಿಗೂ ಲಸಿಕೆ ಅಗತ್ಯವಿದೆ ಎಂದು ಹೇಳಿದರು.

READ ALSO

ವಿಮಾನ ನಿಲ್ದಾಣ, ಜನದಟ್ಟಣೆ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಪ್ರಮುಖವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಮುಂಜಾಗೃತ ಅಗತ್ಯವಿದೆ. ಕ್ರಿಸ್ ಮಸ್, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಕೋವಿಡ್ ಮಾರ್ಗಸೂಚಿ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಲಾಗುವುದು. ಜನರು ಆರೋಗ್ಯದ ಬಗ್ಗೆ ಜಾಗೃತೆ ವಹಿಸುವುದು ಮುಖ್ಯ ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಈಗಾಗಲೇ ಕೋವಿಡ್ ಸಲಹಾ ಸಮಿತಿಗೆ ಬಿಬಿಎಂಪಿ ಮನವಿ ಮಾಡಿದೆ.

ಹೊಸ ವರ್ಷದಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಹಾಗೂ ವಿದೇಶಗಳಿಂದ ನಗರಕ್ಕೆ ಜನರು ಬರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಮಾಸ್ಕ್ ಧರಿಸಲು ಸೂಚಿಸುವಂತೆ ಹಾಗೂ ಮಾರ್ಕೆಟ್, ಮಾಲ್, ಥಿಯೇಟರ್, ಮೆಟ್ರೋ, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಕಡ್ಡಾಯಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಕೋವಿಡ್ ಹೆಚ್ಚುತ್ತಿರುವ ಬಗ್ಗೆ ರಾಜ್ಯ ಗಂಭೀರವಾಗಿ ತೆಗೆದುಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬೆಳವಣಿಗೆಗಳು, ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಗಳು, ಯಾವ ರೀತಿ ಪರೀಕ್ಷೆಗಳು ಹೆಚ್ಚಿಸಬೇಕು. ಜಿನೊಮೆಟಿಕ್ ಪರೀಕ್ಷೆ ಮಾಡುವ ಬಗ್ಗೆ, ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಸುದೀರ್ಘವಾದ ಕಾರ್ಯಕ್ರಮ ರೂಪಿಸಲು ನಾಳೆ ಸಭೆ  ಕರೆಯಲಾಗಿದೆ ಎಂದು ತಿಳಿಸಿದರು.