ಬೆಂಗಳೂರು: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢಪಟ್ಟಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ 5 ವರ್ಷದ ಬಾಲಕಿಯಲ್ಲಿ ಝೀಕಾ ವೈರಸ್ ಸೋಂಕು ಪತ್ತೆಯಾಗಿದೆ. ಕಳೆದ 15 ದಿನಗಳಿಂದ ಜ್ವರ, ವಾಂತಿ, ಬೇಧಿಯಿಂದ ಬಳಲುತ್ತಿದ್ದ ಬಾಲಕಿಯನ್ನು ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬಾಲಕಿಯಲ್ಲಿ ಡೆಂಘಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಸೊಳ್ಳೆ ಕಡಿತದಿಂದ ಬರುವ ಝೀಕಾ ವೈರಸ್, ಆಂಧ್ರ, ತೆಲಂಗಾಣ ಸೇರಿ ರಾಜ್ಯದ ಬೇರೆ ಯಾವ ಜಿಲ್ಲೆಯ ಲಿಂಕ್ ಇದೆ ಅನ್ನೋದರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೇಂದ್ರದ ವೈದ್ಯರ ತಂಡ ಏಕಾಏಕಿ ದಿಢೀರ್ ಭೇಟಿ ನೀಡಿ ಝೀಕಾ ವೈರಸ್‌ಗೆ ಒಳಗಾದ ಬಾಲಕಿಯ ಕುಟುಂಬಸ್ಥರನ್ನು ಪರೀಕ್ಷೆಗೆ ಒಳಪಡಿಸಿದೆ. ಮೆಡಿಕಲ್ ರಿಪೋರ್ಟ್ಸ್, ಪುಣೆಯ ಲ್ಯಾಬ್ ರಿಪೋರ್ಟ್ನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ವಿಮ್ಸ್ ಆಸ್ಪತ್ರೆಯಲ್ಲಿ ಬಾಲಕಿಯ ಸ್ಯಾಂಪಲ್ ಸಂಗ್ರಹಿಸಿ ಪುಣೆಯ ವೈರಾಲಜಿ ಲ್ಯಾಬ್ ಗೆ ರವಾನಿಸಲಾಗಿತ್ತು. ಇದೀಗ ಪುಣೆಯ ಲ್ಯಾಬ್ ನಿಂದ ವರದಿ ಬಂದಿದ್ದು, ಬಾಲಕಿಗೆ ಝೀಕಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
5 ವರ್ಷದ ಬಾಲಕಿಯಲ್ಲಿ ಝೀಕಾ ವೈಸರ್ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಬಾಲಕಿಯ ಕುಟುಂಬದವರ ರಕ್ತ ಹಾಗೂ ಯೂರಿನ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ರವಾನಿಸಲಾಗಿದೆ.