ಕಟೀಲು: ಕೊರೊನಾ ಎರಡನೇ ಅಲೆ ಹಿನ್ನಲೆ ರಾಜ್ಯ ಸರಕಾರ ಯಾವುದೇ ರೀತಿಯ ಜಾತ್ರೆ ಹಾಗೂ ಸಂತೆಗಳನ್ನು ನಡೆಸದಂತೆ ಆದೇಶ ಹೊರಡಿಸಿದ್ದು, ಈ ನಡುವೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಆಚರಣೆ ಅರ್ಧಕ್ಕೆ ಮೊಟಕುಗೊಂಡಿದೆ.
ಜಾತ್ರಾ ಮಹೋತ್ಸವದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ಜಿಲ್ಲಾಧಿಕಾರಿ ಸೂಚನೆಯಂತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೂಲ್ಕಿ ವಿಶೇಷ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಈ ಹಿನ್ನಲೆ ಸೋಮವಾರ ದೇವಳದ ಹಗಲು ರಥೋತ್ಸವ ಬೇಗನೆ ಮುಗಿಸಲಾಗಿತ್ತು. ಮಂಗಳವಾರ ಕಟೀಲು ಅಮ್ಮನವರ ಎಕ್ಕಾರು ಭೇಟಿ ಹಾಗೂ ಶಿಬರೂರು ಶ್ರೀ ಕೊಡಮಣಿತ್ತಾಯ ಭೇಟಿ ರದ್ದಾಗಿದೆ. ಜಾತ್ರೆಯ ಉಳಿದ ಕಾರ್ಯಕ್ರಮಗಳನ್ನು ಪ್ರಾಂಗಣದ ಒಳಗೇ ಸರಳವಾಗಿ ನಡೆಸುವ ಸಾಧ್ಯತೆ ಇದೆ.
ಈ ಬಾರಿ ನಿರ್ಬಂಧಗಳಿದ್ದರೂ ಸರಳವಾಗಿ ಆಚರಣೆಗೆ ಯೋಜಿಸಲಾಗಿತ್ತು. ಅದರಂತೆ ಜಾತ್ರೆ ಪ್ರಾರಂಭಗೊಂಡಿತ್ತು. ಆದರೆ ಜನರಿಗೆ ನಿರ್ಬಂಧಗಳನ್ನು ಹೇರಿದ್ದರೂ ಜನರು ಸ್ವಯಂ ಆಗಿ ದೇವಾಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುವುದು ಜಿಲ್ಲಾಡಳಿತಕ್ಕೆ ಸವಾಲಾಗಿತ್ತು. ಆ ಹಿನ್ನೆಲೆಯಲ್ಲಿ ಸೋಮವಾರ ಮಂಗಳೂರು ತಹಸೀಲ್ದಾರ್ ಮತ್ತಿತರ ಅಧಿಕಾರಿಗಳು ದೇವಳಕ್ಕೆ ತೆರಳಿ ಸರ್ಕಾರದ ಆದೇಶದ ಅನ್ವಯ ಜಾತ್ರೋತ್ಸವ ಆಚರಣೆ ರದ್ದು ಮಾಡುವಂತೆ ಸೂಚನೆ ನೀಡಿದ್ದರು.