ಶಿರಾಡಿ: ಗುಂಡ್ಯದಲ್ಲಿ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಮತ್ತು ಸ್ವಿಫ್ಟ್ ಡಿಸೈರ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಬೆಳ್ತಂಗಡಿಯ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ, ಶ್ರೀಧರ್ ಮರಕ, ಜನಾರ್ದನ ಕೆರಿಮಾರ್, ಸುರೇಶ್ ಎಂಬವರು ಸಕಲೇಶಪುರ ಮದುವೆಗೆ ಹೋಗಿ ಕೊಕ್ಕಡಕ್ಕೆ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.
ಧರ್ಮಸ್ಥಳದಿಂದ ಮಧ್ಯಾಹ್ನ 2.30ಕ್ಕೆ ಹೊರಟು ಬೆಂಗಳೂರು ಮೂಲಕ ತಿರುಪತಿ ಹೊರಟಿರುವ ರಾಜಹಂಸ ಬಸ್ ಹಾಗೂ ಕಾರಿನ ಮಧ್ಯೆ ಶಿರಾಡಿ ಘಾಟ್ ಗಡಿ ಸಮೀಪ ಅಪಘಾತ ಸಂಭವಿಸಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ 3 ಜನ ಪ್ರಯಾಣಿಕರು ಉಸಿರು ಚೆಲ್ಲಿದ್ದಾರೆ. ಶಿಶಿಲ ಧರ್ಮದಕಲ ನಿವಾಸಿ ಚಂದ್ರಶೇಖರ್ ಗೌಡ, ಶ್ರೀಧರ್ ಮರಕಡ, ಜನಾರ್ದನ ಗೌಡ ಕೆರಿಮಾರ್ ಮೃತರು. ಸುರೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಸಂಬಂಧಿಕರಾಗಿದ್ದಾರೆ.
ಗುಂಡ್ಯದ ಗಡಿ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ರಕ್ತಸಿಕ್ತವಾಗಿದ್ದವರನ್ನು ಸ್ಥಳೀಯರ ನೆರವಿನೊಂದಿಗೆ ಹೊರತೆಗೆದಿದ್ದಾರೆ.





