ಮಾಜಿ ಯೋಧನ ಮನೆಗೆ ಕನ್ನ ಹಾಕಿದ ಕದೀಮರು ಒಂಟಿ ಮಹಿಳೆಯನ್ನು ಹತ್ಯೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಡಿಕೇರಿಯ ಕಳಕೇರಿ ನಿಡುಗಣೆ ಗ್ರಾಮದಲ್ಲಿ ನಡೆದ ಘಟನೆ!

ಮಡಿಕೇರಿ: ಮನೆಯಲ್ಲಿ ಒಬ್ಬರೇ ಇದ್ದ ಮಹಿಳೆಯನ್ನು ಕೊಲೆ ಮಾಡಿ, ಮನೆಯಲ್ಲಿದ್ದ  ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ಮಡಿಕೇರಿ ಹೊರ ವಲಯದ ಕ್ಲಬ್ ಮಹಿಂದ್ರ ಸಮೀಪದ ಕಳಕೇರಿ ನಿಡುಗಣೆ ಗ್ರಾಮದಲ್ಲಿ ನಡೆದಿದೆ.

READ ALSO

ಮಾಜಿ ಯೋಧ ದಿ.ಬೈಲಾಡಿ ಹೊನ್ನಪ್ಪ ಅವರ ಪತ್ನಿ ಲಲಿತಾ(70) ಎಂಬವರು ಹತ್ಯೆಗೊಳಗಾದ ಮಹಿಳೆ. ಕಳ್ಳರು ಮನೆಯಲ್ಲಿದ್ದ 50 ಸಾವಿರ ರೂ. ನಗದು, 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಈ ಸಂಬಂಧ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಲಿತಾ ಅವರ ಮನೆಯ ಸಮೀಪ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಹೊರ ರಾಜ್ಯದ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು, ಕೆಲಸದವರ ಮೇಲೂ ಸಂಶಯ ವ್ಯಕ್ತವಾಗಿದೆ. ಈ ಘಟನೆ ಪೂರ್ವ ನಿಯೋಜಿತ ಕೃತ್ಯ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿ ಕಿರಣ್, ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗದ ಠಾಣಾಧಿಕಾರಿ ಸದಾಶಿವ, ಶ್ವಾನ ದಳ, ಬೆರಳಚ್ಚು ವಿಭಾಗದ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಜಿಲ್ಲಾ ಅಪರಾಧ ಪತ್ತೆ ದಳ ಕೂಡ ತನಿಖೆ ಕೈಗೆತ್ತಿಕೊಂಡಿದೆ.

ಇನ್ನು ಕೊಲೆಯಾದ ಲಲಿತಾ ಅವರು ಕಳೆದ 7 ವರ್ಷಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮಗಳು ಚಂದ್ರಾವತಿ ಕಲ್ಲುಗುಂಡಿ ಹಾಗೂ ಮತ್ತೋರ್ವ ಮಗಳು ಮೀನಾ ಬೆಂಗಳೂರಿನಲ್ಲಿ ವಾಸವಿದ್ದರೆ ಪುತ್ರ ಗೋಪಾಲಕೃಷ್ಣ ಮೈಸೂರಿನಲ್ಲಿ ಉದ್ಯೋಗದಲ್ಲಿದ್ದರು. ಲಲಿತಾ ಅವರ ಮನೆ ಇರುವ ಪ್ರದೇಶದ ಸುತ್ತ ಕಾಫಿ ತೋಟವಿದ್ದು, ಸೋಮವಾರ ಸಂಜೆ ಮನೆಯ ಹಿಂಬದಿಯ ಬಚ್ಚಲು ಮನೆಯಲ್ಲಿ ಬೆಂಕಿ ಉರಿಸುತ್ತಿದ್ದ ಸಂದರ್ಭ ಸೌದೆಯಿಂದ ಅವರ ತಲೆಯ ಹಿಂಭಾಗಕ್ಕೆ ಹೊಡೆಯಲಾಗಿದೆ. ಲಲಿತಾ ಸ್ಥಳದಲ್ಲೇ ಉಸಿರು ಚೆಲ್ಲಿದ್ದು, ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ.

ಲಲಿತಾ ಅವರ ಮಕ್ಕಳು ಪ್ರತಿ ನಿತ್ಯ ಸಂಜೆ 7 ಗಂಟೆಗೆ ತಾಯಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದರು. ಎಂದಿನಂತೆ ಸೋಮವಾರ ಸಂಜೆ ಕೂಡ ತಾಯಿಯ ಮೊಬೈಲ್‍ಗೆ ಕರೆ ಮಾಡಿದಾಗ ಲಲಿತಾ ಕರೆ ಸ್ವೀಕರಿಸಿರಲಿಲ್ಲ. ತಾಯಿ ಮನೆಯ ಹೊರಗಿರಬಹುದೆಂದು ಭಾವಿಸಿದ ಮಕ್ಕಳು ಸ್ವಲ್ಪ ಹೊತ್ತಿನ ಬಳಿಕ ಪದೇ ಪದೇ ತಾಯಿಗೆ ಕರೆ ಮಾಡಿದ್ದಾರೆ. ಆದರೆ ಲಲಿತಾ ಮಾತ್ರ ಮೊಬೈಲ್ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಮಕ್ಕಳು ರಾತ್ರಿ 8 ಗಂಟೆಗೆ ಲಲಿತಾ ಅವರ ಮನೆಯ ಸಮೀಪ ವಾಸವಿರುವ ತಮ್ಮ ಸಂಬಂಧಿಕರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಅದರಂತೆ ಸಂಬಂಧಿಕರು ಲಲಿತಾ ಅವರ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಒಳ ಹೋಗಿ ನೋಡಿದಾಗ ಮನೆಯ ಒಳಗಿನ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವುದು ಕಂಡು ಬಂದಿದೆ. ಮನೆಯ ಹಿಂಬದಿಯ ಬಚ್ಚಲು ಮನೆಯ ಬಳಿ ತೆರಳಿದಾಗ ಬೆಂಕಿ ಒಲೆಯ ಮುಂದೆ ಲಲಿತಾ ರಕ್ತದ ಮಡುವಲ್ಲಿ ಬಿದ್ದು, ಸಾವನಪ್ಪಿರುವುದು ಕಂಡು ಬಂದಿದೆ. ಬಳಿಕ ಸಂಬಂಧಿಕರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶಾವಾಗಾರಕ್ಕೆ ಸ್ಥಳಾಂತರಿಸಿದ್ದರು.

ಕಳ್ಳತನ
ಲಲಿತಾ ಅವರೇ ಖುದ್ದಾಗಿ ತೋಟ ನಿರ್ವಹಿಸುತ್ತಿದ್ದು ಈ ಬಾರಿ ಉತ್ತಮ ಕಾಫಿ ಫಸಲು ದೊರೆತಿತ್ತು ಎನ್ನಲಾಗಿದ್ದು, ಕೆಲವು ಸಮಯದ ಹಿಂದೆ ಲಲಿತಾ ಕಾಫಿಯನ್ನು ಮಾರಾಟ ಮಾಡಿದ್ದರು. ಮೈಸೂರಿನಲ್ಲಿದ್ದ ಮಗ ಗೋಪಾಲಕೃಷ್ಣ ಇತ್ತೀಚೆಗೆ ಮನೆಗೆ ಬಂದು ಕಾಫಿ ಮಾರಾಟ ಮಾಡಿದ್ದ ಹಣವನ್ನು ಪಡೆದುಕೊಂಡು 50 ಸಾವಿರ ರೂ. ನಗದನ್ನು ತಾಯಿಯ ಖರ್ಚಿಗಾಗಿ ಮನೆಯಲ್ಲಿಟ್ಟಿದ್ದರು. ಲಲಿತಾ ಅವರನ್ನು ಕೊಲೆ ಮಾಡಿದ ಬಳಿಕ ಮನೆಯ ಒಳಗೆ ಪ್ರವೇಶ ಮಾಡಿರುವ ದುಷ್ಕರ್ಮಿಗಳು ಮನೆಯಲ್ಲಿದ್ದ ಕಪಾಟು ಪೆಟ್ಟಿಗೆಗಳನ್ನು ಜಾಲಾಡಿದ್ದು, ಬೀರುವಿನಲ್ಲಿಟ್ಟಿದ್ದ ವಸ್ತುಗಳ ಚೆಲ್ಲಾಪಿಲ್ಲಿಯಾಗಿವೆ. 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಕಾಫಿ ಮಾರಾಟ ಮಾಡಿದ ಹಣ 50 ಸಾವಿರವನ್ನು ದೋಚಿದ್ದಾರೆ.

ಲಲಿತಾ ಅವರ ಪತಿ ದಿ.ಹೊನ್ನಪ್ಪ ಅವರು ಮಾಜಿ ಯೋಧರಾಗಿದ್ದು ಬಂದೂಕು ಮತ್ತು ಆರ್ಮಿ ಕ್ಯಾಂಟೀನ್ ಸೌಲಭ್ಯವನ್ನು ಲಲಿತಾ ಅವರು ಹೊಂದಿದ್ದರು. ಕೋವಿಯಿದ್ದ ಬೀರುವನ್ನು ಕೂಡ ತೆರದು ನೋಡಿರುವ ದುಷ್ಕರ್ಮಿಗಳು ಕೋವಿಯನ್ನು ಅಲ್ಲಿಯೇ ಬಿಟ್ಟಿದ್ದಾರೆ. ಕ್ಯಾಂಟೀನ್‍ನಲ್ಲಿ ದೊರೆಯುತ್ತಿದ್ದ ಮದ್ಯದ ಬಾಟಲಿಗಳನ್ನು ಲಲಿತಾ ಮನೆಯ ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಿದ್ದರು. ಈ ಪೆಟ್ಟಿಗೆಯನ್ನು ಕೂಡ ತೆರೆದು ಅದರಲ್ಲಿದ್ದ ದುಬಾರಿ ಬೆಲೆಯ 7 ಮದ್ಯದ ಬಾಟಲಿಗಳನ್ನು ಕೂಡ ಹೊತ್ತೊಯ್ದು ಮನೆಯಿಂದ ಕೇವಲ 150 ಅಡಿ ಮುಂದಿನ ರಸ್ತೆ ಬದಿಯ ಕಾಡಿನಲ್ಲಿ ಕೊಲೆಗಾರರು ಬಚ್ಚಿಟ್ಟಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.