
ಬೆಂಗಳೂರು : “ನಮ್ಮೂರು ನಮ್ಮ ಕೆರೆ” ವಿಶಿಷ್ಟ ಸೇವೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮಲೇಷ್ಯಾದಲ್ಲಿ ವಿಜಯವಾಣಿ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕುಡಿಯುವ ನೀರು, ಕೃಷಿ ಗೆ ನೀರು, ಪ್ರಾಣಿ ಸಂಕುಲಗಳಿಗೆ ಬರಡು ಭೂಮಿಯಲ್ಲೂ ನೀರು ಸಿಗಬೇಕು ಎನ್ನುವ ಉದ್ದೇಶದಿಂದ “ನಮ್ಮೂರು ನಮ್ಮ ಕೆರೆ” ಕೆರೆಗಳಿಗೆ ಕಾಯಕಲ್ಪ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 1000 ಕೆರೆಗಳನ್ನು ಜೀರ್ಣೋದ್ಧಾರಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ರಾಜ್ಯದ ನಂ.1 ದಿನಪತ್ರಿಕೆ “ವಿಜಯವಾಣಿ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

2016 ರಲ್ಲಿ ಊರಿಗೆ ನೀರುಣಿಸುತ್ತಿದ್ದ ಕೆರೆಗಳು ಕಣ್ಮರೆಯಾಗುತ್ತಿದ್ದನ್ನು ಕಂಡ ಡಾ.ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು “ನಮ್ಮೂರು ನಮ್ಮ ಕೆರೆ” ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮ ಜಾರಿಗೆ ತಂದರು. ರೈತರು ಮಹಿಳೆಯರನ್ನು ಒಳಗೊಂಡ ಕೆರೆ ಸಮಿತಿಗಳನ್ನು ರಚಿಸಿ ಜನರ ಸಹಭಾಗಿತ್ವವನ್ನು ಪಡೆದು ಜೊತೆಗೆ ಸಂಸ್ಥೆಯ 160 ನೋಡೆಲ್ ಅಧಿಕಾರಿಗಳು 07 ಜನ ನುರಿತ ಇಂಜಿನಿಯರ್‌ಗಳ ತಂಡವನ್ನು ರಚಿಸಿ ಈ ಕೆರೆಗಳ ಪುನಶ್ಚೇತನ ಮಾಡಲಾಗುತ್ತಿದೆ. ಕುಡಿಯುವ ನೀರು ಅಲ್ಲದೆ ಪ್ರಾಣಿ ಸಂಕುಲಗಳಿಗೂ, ಜಾನುವಾರುಗಳಿಗೂ ನೀರು ಯೆತೇಚ್ಛವಾಗಿ ಸಿಗಬೇಕೆಂದು ಶಿವಮೊಗ್ಗದ ತಾವರೆಕೆರೆ ಹುಲಿ ಮತ್ತು ಸಿಂಹಧಾಮದಲ್ಲಿ 10 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಯೆತೇಚ್ಛನೀರು ಬರುತ್ತಿದ್ದು ಸುಮಾರು 400 ವನ್ಯ ಜೀವಿಗಳಿಗೆ ನೀರು ಆಶ್ರಯವಾಗಿದೆ.

ಇದುವರೆಗೆ 914 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಸುಮಾರು 332.30 ಲಕ್ಷ ಕ್ಯು.ಮೀ. ಹೂಳನ್ನು ತೆಗೆಯಲಾಗಿದೆ. ಸುಮಾರು 877.84 ಕೋಟಿ ಗ್ಯಾಲನ್ ನೀರಿನ ಸಂಗ್ರಹಣ ಸಾಮರ್ಥ್ಯ ಹೆಚ್ಚಳಗೊಂಡಿದೆ ಇದರಿಂದ 2,65,962 ಎಕ್ರೆ ಕೃಷಿ ಭೂಮಿಗೆ ಪ್ರಯೋಜನವಾಗಿದ್ದು 4,18,174 ಕುಟುಂಬಗಳು ಪ್ರಯೋಜನ ಪಡೆದಿದ್ದು 402.62 ಎಕ್ರೆ ಪ್ರದೇಶ ಒತ್ತುವರಿ ತೆರವುಗೊಳಿಸಲಾಗಿದೆ. ಇದಕ್ಕೆ ಯೋಜನೆಯಿಂದ 72.37 ಕೋಟಿ ಅನುದಾನವನ್ನು ಬಳಸಲಾಗಿದೆ.
ಶ್ರೀ ಕ್ಷೇತ್ರದ ಪರವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಶ್ರೀ ಸುರೇಂದ್ರ ಕುಮಾರ್ ಇವರಿಗೆ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.