ಚಿತ್ರದುರ್ಗ: ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಯೋಗ ವನ ಬೆಟ್ಟಗಳ ಸ್ಥಾಪಕ, ಆಯುರ್ವೇದ ಪಂಡಿತ ಕರ್ಪದಿ ಸಿದ್ದಲಿಂಗ ಸ್ವಾಮೀಜಿ(75) ಶನಿವಾರ ಸಂಜೆ ಲಿಂಗೈಕ್ಯರಾಗಿದ್ದಾರೆ.
ಇವರು 30 ವರ್ಷಗಳ ಹಿಂದೆ ಚಿತ್ರದುರ್ಗದ ಮುರುಘಾಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಸಿದ್ದಲಿಂಗ ಸ್ವಾಮೀಜಿಯಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.
ಇವರು ಬೆಂಗಳೂರಿನ ಕನಕಪುರದ ಗೊಲ್ಲರಪಾಳ್ಯದಲ್ಲಿ ಮೊದಲ ಯೋಗವನ ಬೆಟ್ಟವನ್ನು ಸ್ಥಾಪಿಸಿದರು. ನಂತರ ಕುಣಿಗಲ್ ಹಾಗೂ 4 ವರ್ಷಗಳ ಹಿಂದೆ ಚಿತ್ರದುರ್ಗ ಹಾಗೂ ಆಲೂರು ತಾಲೂಕಿನ ಮರಸು ಗ್ರಾಮದಲ್ಲೂ ಇತ್ತೀಚೆಗೆ ಯೋಗವನ ಬೆಟ್ಟವನ್ನು ಸ್ಥಾಪಿಸಿದ್ದರು.
ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲೋಪತಿ ಚಿಕಿತ್ಸೆಯನ್ನು ನಿರಾಕರಿಸಿದ್ದ ಶ್ರೀಗಳು, ಆಯುರ್ವೇದ ಔಷಧವನ್ನೇ ಸೇವಿಸುತ್ತಿದ್ದರು ಎನ್ನಲಾಗಿದೆ.
ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಕುಣಿಗಲ್ ಯೋಗವನ ಬೆಟ್ಟಕ್ಕೆ ಕರೆತಂದು ರಾತ್ರಿಯೇ ಅವರ ಪೂರ್ವಾಶ್ರಮದ ಸ್ವ ಸ್ಥಳ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮರಸು ಗ್ರಾಮಕ್ಕೆ ಕೊಂಡೊಯ್ಯಲಾಗಿದೆ.
ಭಾನುವಾರ ಮಧ್ಯಾಹ್ನ ಬಸವತತ್ವ ವಿಧಿಯಾನುಸಾರ ಸ್ವಾಮೀಜಿ ಅವರ ಅಂತಿಮ ಸಂಸ್ಕಾರ ನೇರವೇರಲಿದೆ.