ಕರಾವಳಿಯ ಎಲ್ಲೆಡೆ ಹೋದರು ಅಲ್ಲಲ್ಲಿ ಕಾಣಸಿಗುವುದೇ ಟವರ್ ಗಳ ರಾಶಿ ರಾಶಿ, ಆದರೆ ಇವೆಲ್ಲವೂ ಯಾರಿಗೂ ಸಮಯಕ್ಕೆ ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗದಷ್ಟು ಕಠಿಣವಾಗಿದೆ.
ಇತ್ತೀಚೆಗಂತೂ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿದ್ದು ಮಕ್ಕಳ ಪರದಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಮೊಬೈಲ್ ನಲ್ಲಿ ಸಿಗ್ನಲ್ ತೋರಿಸಿದರು ನೆಟ್ ಸರಿಯಾಗಿ ಸಿಗದೇ ತೊಂದರೆ ಪಡುವವರ ಸಂಕಷ್ಟ ಅಷ್ಟಿಷ್ಟಲ್ಲ.
ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಮೊಬೈಲ್ ನೆಟ್ ವರ್ಕ್ ಸೇರಿಸುವುದು ಸೂಕ್ತ:
ಮೂಲಭೂತ ಸೌಕರ್ಯದ ಕೊರತೆಯಲ್ಲಿ ಮೊಬೈಲ್ ನೆಟ್ ವರ್ಕ್ ನ್ನು ಸೇರಿಸಿದರೆ ಉತ್ತಮ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮಾಡದೇ ಇರುವ ವ್ಯಕ್ತಿಗಳಿಲ್ಲ ಪ್ರತಿ ಕ್ಷಣಕ್ಷಣಕ್ಕೂ ಎಲ್ಲಾ ವಿಚಾರಗಳಿಗೂ ಮೊಬೈಲ್ ಬಳಕೆ ಕಡೆಗೆ ಜನತೆಯ ಒಲವು ಹೆಚ್ಚಾಗುತ್ತಿದ್ದು ಕುಡಿಯುವ ನೀರು, ರಸ್ತೆ ಸಂಪರ್ಕದಂತೆ ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಮೊಬೈಲ್ ನೆಟ್ ವರ್ಕ್ ಗಳನ್ನು ಸೇರಿಸುವ ಅನಿವಾರ್ಯತೆ ಇದೆ.
ಕಣಿವೆ ಪ್ರದೇಶ – ಘಾಟ್ ರಸ್ತೆಗಳಲ್ಲಿಯೂ ನೆಟ್ ವರ್ಕ್ ಗೆ ಬರ!
ಕರಾವಳಿಯನ್ನು ಸಂದಿಸುವ ಚಾರ್ಮಾಡಿ ಘಾಟ್, ಶಿರಾಡಿ ಘಾಟ್ ರಸ್ತೆಗಳಲ್ಲೂ ಹಲವಾರು ಕಿ.ಮೀ ವರೆಗೆ ನೆಟ್ ವರ್ಕ್ ಮಾಯವಾಗಿದೆ. ಈ ಸ್ಥಳದಲ್ಲಿ ಅಫಘಾತಗಳು ಅಥವಾ ವಾಹನಗಳು ಕೆಟ್ಟು ನಿಂತರೇ ಅಲ್ಲಿ ಆಗುವ ನರಕ ವೇದನೆಯನ್ನು ಹೇಳ ತೀರದು. ವಾಸ್ತವಿಕವಾಗಿ ಈ ಪ್ರದೇಶದಲ್ಲಿ ಕಾನೂನಿನ ತೊಡಕು ಇದ್ದರೂ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ನೆಟ್ ವರ್ಕ್ ಅನಿವಾರ್ಯವಾಗಿ ಬೇಕಾಗುತ್ತದೆ.
ಹಣ ಕೊಟ್ಟು ನದಿ ದಾಟಿದ ಗಾದೆಯಂತಾಗಿದೆ ಇಂದಿನ ನೆಟ್ ವರ್ಕ್ ಪರಿಸ್ಥಿತಿ:
ಹೌದು ಇತ್ತೀಚಿನ ಕೆಲವೋಂದು ನೆಟ್ ವರ್ಕ್ ಕಂಪೆನಿಗಳ ನಿಯಮ ನಿಬಂಧನೆಗಳನ್ನು ಮೊಬೈಲ್ ಬಳಕೆದಾರರು ಸರಿಯಾಗಿ ಪಾಲನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇಲ್ಲವಾದಲ್ಲಿ ಕ್ಷಣ ಮಾತ್ರದಲ್ಲಿ ಸಂಪರ್ಕ ಕಡಿತವಾಗುತ್ತದೆ. ಪ್ರತಿ ತಿಂಗಳು ಮೂರುತಿಂಗಳು, ಆರು ತಿಂಗಳು, ವರ್ಷದ ಆಫರ್ ಗಳ ಮೇಲೆ ರಿಚಾರ್ಜ್ ಮಾಡಿಸಿ ಕನಿಷ್ಠ ಮಾತನಾಡಲು ಆಗದಂತಹ ಪರಿಸ್ಥಿತಿಗಳು ಬಹುತೇಕರ ಅನುಭವಕ್ಕೆ ಬಂದಿರಲೂ ಬಹುದು. ಗ್ರಾಮೀಣ ಪರಿಸರದಲ್ಲಂತೂ ಶೇ.90 ರಷ್ಟು ಮಂದಿ ರಿಚಾರ್ಜ್ ಮಾಡಿ ಮೊಬೈಲ್ ಬಳಕೆ ಮಾಡಲಾಗದೆ ಕಂಗೆಟ್ಟಿರೋದಂತು ಸ್ಪಷ್ಟ.
ನೆಟ್ ವರ್ಕ್ ಸಮಸ್ಯೆಗಳಿಗೆ ಮುಕ್ತಿ ಎಂದು: ಹಲವು ದಿನಗಳಿಂದ ಬಿಗಡಾಯಿಸಿದ ಈ ನೆಟ್ ವರ್ಕ್ ಸಮಸ್ಯೆಗೆ ಶಾಶ್ವತ ಮುಕ್ತಿ ಯಾವಾಗ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಕಾರ್ಯತಂತ್ರ ರೂಪಿಸುವಂತಾಗಲಿ.