ಲಕ್ನೊ: ಮೊಬೈಲ್ ಕರೆಯಲ್ಲಿ ನಿರತವಾಗಿದ್ದ ದಾದಿಯೊಬ್ಬಳು ಮಹಿಳೆಯೊಬ್ಬರಿಗೆ ಒಂದೇ ಸಲ ಎರಡು ಬಾರಿ ಕೋವಿಡ್ -19 ಲಸಿಕೆಯ ಡೋಸ್ ನೀಡಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಅಕ್ಬರ್ ಪುರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್ ಸಿ) ಶನಿವಾರ ಈ ಘಟನೆ ನಡೆದಿದೆ.
ಎರಡು ಚುಚ್ಚುಮದ್ದು ನೀಡಿದ ಬಗ್ಗೆ ಮಹಿಳೆಯು ದಾದಿಯನ್ನು ವಿಚಾರಿಸಿದಾಗ,ಆಕೆ ಕ್ಷಮೆಯಾಚಿಸುವ ಬದಲು ಮಹಿಳೆಯನ್ನು ಗದರಿಸಿದ್ದಳು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಶನಿವಾರ 50 ರ ವಯಸ್ಸಿನ ಕಮಲೇಶ್ ಕುಮಾರಿ ಎಂಬ ಮಹಿಳೆ ಕೋವಿಡ್ -19 ವಿರುದ್ಧ ಲಸಿಕೆ ಪಡೆಯಲು ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು.
ಶಿಷ್ಟಾಚಾರದ ಪ್ರಕಾರ, ಮಹಿಳೆಗೆ ಇಂದು ಲಸಿಕೆಯ ಒಂದು ಡೋಸ್ ನೀಡಬೇಕಾಗಿತ್ತು. ಕೆಲವು ವಾರಗಳ ನಂತರ, ಲಸಿಕೆಯನ್ನು ಆಧರಿಸಿ ಮುಂದಿನ ಡೋಸ್ ನೀಡಬೇಕಾಗಿತ್ತು.
ಆದರೆ, ದಾದಿಯ ನಿರ್ಲಕ್ಷ್ಯದಿಂದಾಗಿ ಕಮಲೇಶ್ ಕುಮಾರಿಗೆ ಒಂದೇ ದಿನದಲ್ಲಿ ಲಸಿಕೆಯ ಎರಡು ಡೋಸ್ ಗಳನ್ನು ನೀಡಲಾಗಿದೆ.
ಈ ಸುದ್ದಿ ಮಹಿಳೆಯ ಕುಟುಂಬ ಸದಸ್ಯರಿಗೆ ಗೊತ್ತಾಗುತ್ತಿದ್ದಂತೆ, ಅವರು ಆರೋಗ್ಯ ಕೇಂದ್ರದಲ್ಲಿ ಕೋಲಾಹಲವನ್ನು ಸೃಷ್ಟಿಸಿದರು. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ದಾದಿಯ ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಿದರು.
ಲಸಿಕೆಯ ಎರಡು ಡೋಸ್ ನಿಂದಾಗಿ, ಕಮಲೇಶ್ ಕುಮಾರಿ ಅವರ ಕೈ ಸ್ವಲ್ಪ ಊದಿಕೊಂಡಿದೆ. ಆದರೆ ಯಾವುದೇ ಗಂಭೀರ ಲಕ್ಷಣಗಳು ವರದಿಯಾಗಿಲ್ಲ ಎಂದು ಪಿಟಿಐ ತಿಳಿಸಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿತೇಂದ್ರ ಪ್ರತಾಪ್ ಸಿಂಗ್ ಅವರು ನಿರ್ಲಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಘಟನೆಯ ಬಗ್ಗೆ ತನಿಖೆ ಮಾಡಲು ಹಾಗೂ ಸತ್ಯ ಶೋಧನಾ ವರದಿಯನ್ನು ಸಲ್ಲಿಸುವಂತೆ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿಗೆ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.