ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೇರಳದ ಗ್ಯಾಂಗ್’ಸ್ಟರ್ ಜಿಯಾ ಮುಂಬಯಿಯಲ್ಲಿ ಬಂಧನ!

ಮಂಗಳೂರು: ಕೇರಳ ಮತ್ತು ಕರ್ನಾಟಕದಲ್ಲಿ ದುಷ್ಕೃತ್ಯದಲ್ಲಿ ಭಾಗಿಯಾದ ರೌಡಿ ಶೀಟರ್ ಯೂಸುಫ್ ಜಿಯಾನನ್ನು ಕೇರಳ ಎಟಿಎಸ್ ತಂಡ ಮುಂಬಯಿಯಲ್ಲಿ ಗುರುವಾರ ರಾತ್ರಿ ಬಂಧಿಸಿದೆ.

ಕೇರಳ ಮತ್ತು ಕರ್ನಾಟಕದಲ್ಲಿ ಹಲವು ಕೃತ್ಯಗಳಲ್ಲಿ ಭಾಗಿಯಾದ ರೌಡಿಶೀಟರ್ ಖಾಲಿಯಾ ರಫೀಕ್‌ನನ್ನು ಮಂಗಳೂರಿನ ಹೆದ್ದಾರಿಯಲ್ಲಿ ಕೊಲೆ ನಡೆಸಿದ್ದ ಜಿಯಾ, ಉಭಯ ರಾಜ್ಯಗಳ ಪೋಲೀಸ್ ಇಲಾಖೆಗೆ ಬೇಕಾಗಿದ್ದ ಮೋಸ್ಟ್’ವಾಂಟೆಟ್ ಆರೋಪಿಯಾಗಿದ್ದ.

READ ALSO

2017ರ ಫೆ.14ರಂದು ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಲಿಯಾ ರಫೀಕ್‌ನನ್ನು ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ಲಾರಿಯಿಂದ ಗುದ್ದಿಸಿ ಬಳಿಕ ಗುಂಡಿಕ್ಕಿ, ತಲವಾರು ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಹಲವರನ್ನು ಈ ಹಿಂದೆಯೇ ಮಂಗಳೂರು ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ಜಿಯಾ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.

ಜಿಯಾ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ ಲುಕ್‌ಔಟ್ ನೋಟಿಸು ಹೊರಡಿಸಲಾಗಿತ್ತು. ಖಾಲಿಯಾ ಕೊಲೆ ಪ್ರಕರಣದ ಹೆಚ್ಚಿನ ವಿಚಾರಣೆಗೆ ಜಿಯಾನನ್ನು ವಶಕ್ಕೆ ನೀಡುವಂತೆ ಶೀಘ್ರವೇ ಕೇರಳ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ

ಕೇರಳದ ನಟಿಯ ಮೇಲೆ ಗುಂಡು ಹಾರಿಸಿದ್ದ ಜಿಯಾ, ಘಟನೆಯ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದು, ಕೆಲವು ಸಮಯದ ಬಳಿಕ ನಕಲಿ ಪಾಸ್‌ಪೋರ್ಟ್ ಬಳಸಿ ಕೇರಳಕ್ಕೆ ಆಗಮಿಸಿದ್ದ ಗುರುವಾರ ಮತ್ತೆ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದು, ಈ ಸಂದರ್ಭ ಎಮಿಗ್ರೇಷನ್ ಅಧಿಕಾರಿಗಳು ಪರಿಶೀಲನ ನಡೆಸಿದಾಗ ನಕಲಿ ಪಾಸ್‌ಪೋರ್ಟ್ ಎಂದು ದೃಢಪಟ್ಟಿದೆ.

ಕೂಡಲೇ ಈತನ ಬಗ್ಗೆ ಶೋಧ ನಡೆಸಿದಾಗ ಕರ್ನಾಟಕ ಮತ್ತು ಕೇರಳ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿರುವುದು ತಿಳಿದುಬಂದಿದ್ದು ಬಳಿಕ ಬಂಧಿಸಲಾಗಿದೆ.