
ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದೆ.
ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ಆಗಸ್ಟ್ 17ರಂದು ರಾಜ್ಯಪಾಲರು ಅನುಮತಿ ನೀಡಿದ್ದರು. ಈ ಅನುಮತಿಯನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಮೊದಲ ಬಾರಿಗೆ ಆಗಸ್ಟ್ 19ರಂದು ಕೈಗೆತ್ತಿಕೊಂಡಿದ್ದು ತೀರ್ಪು ಪ್ರಕಟವಾಗುವವರೆಗೂ ವಿಚಾರಣೆ ಮುಂದೂಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಮಧ್ಯಂತರ ಆದೇಶ ನೀಡಿತ್ತು.
ಇದೀಗ ಮಧ್ಯಂತರ ಆದೇಶವನ್ನು ಮುಂದುವರಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಜೊತೆಗೆ ರಾಜ್ಯಪಾಲರು ತನಿಖೆಗೆ ನೀಡಿರುವ ಮಂಜೂರಾತಿಯಲ್ಲಿ ಯಾವುದೇ ದೋಷವಿಲ್ಲ, ವಿವೇಚನಾಯುತವಾಗಿದೆ. ತನಿಖಾಧಿಕಾರಿಯಿಂದ ಮುಂಚಿತವಾಗಿ ತನಿಖೆ ನಡೆಸಿ ವರದಿ ಪಡೆಯಬೇಕಾದ ಅಗತ್ಯವಿಲ್ಲವೆಂದು ಹೇಳಿದೆ.