ಹಾಸನ: ಕಾರು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ಕರ್ತವ್ಯ ನಿರತ ನಗರದ ಟ್ರಾಫಿಕ್ ಹೆಡ್‌ಕಾನ್ಸ್‌ಟೇಬಲ್ ಶನಿವಾರ ಸಂಜೆ ಅಸುನೀಗಿದರು.
ಮಧುಸೂದನ್(44) ಮೃತ ದುರ್ದೈವಿ. ಹಾಸನ-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಗಾಡೇನಹಳ್ಳಿ ಸಮೀಪ ಇಂಟರ್ ಸೆಪ್ಟರ್ ನಲ್ಲಿ ಅಧಿಕಾರಿಗಳು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಧುಸೂದನ್‌ಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಕೂಡಲೇ ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ವಿಜಯ ನಗರ ಬಡಾವಣೆ ನಿವಾಸಿಯಾಗಿದ್ದು, ಪತ್ನಿ, ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು ಸೇರಿದಂತೆ ಬಂಧುಗಳನ್ನು ಅಗಲಿದ್ದಾರೆ. ಆಸ್ಪತ್ರೆಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.