ಬೆಂಗಳೂರು: ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಯನ್ನು ನೇಮಿಸಲು ಆದೇಶಿಸಿರುವ ಸರ್ಕಾರ ಆಡಳಿತಾಧಿಕಾರಿಗಳಿಗೆ ಅಧಿಕಾರ ಹಂಚಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಸಂಬಂಧ ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.
ಗ್ರಾಮ ಪಂಚಾಯಿತಿಯ ಹಣಕಾಸಿನ ವ್ಯವಹಾರಗಳನ್ನು ಆಡಳಿತಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ನಿರ್ವಹಣೆ ಮಾಡಬೇಕು. ವಾರ್ಡ್ ಸಭೆ ಮತ್ತು ಗ್ರಾಮಸಭೆಗಳನ್ನು ಕಾಲ ಕಾಲಕ್ಕೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೊರೊನಾ ಹರಡದಂತೆ ನೋಡಿಕೊಳ್ಳಲು ರಚಿಸಲಾಗಿರುವ ಕಾರ್ಯಪಡೆಯ ಕರ್ತವ್ಯಗಳನ್ನು ನಿರ್ವಹಣೆ ಮಾಡಬೇಕು. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಂಥಾಲಯಗಳ ನಿರ್ವಹಣೆ ಹಾಗೂ ಮೇಲ್ವಿಚಾರಕರಿಗೆ ಗೌರವಧನ ವಿತರಣೆ ಮಾಡಬೇಕು. ಜತೆಗೆ ಗ್ರಾಮ ಪಂಚಾಯಿತಿ ನೌಕರರಿಗೆ ಮಾಸಿಕ ಕನಿಷ್ಠ ವೇತನ ನೀಡಬೇಕು. ಈ ಅವಧಿಯಲ್ಲಿ ಗ್ರಾಮ ಪಂಚಾಯತಿಗಳು ಯಾವುದೇ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.