ತಿಂಗಳ ವೇತನದಿಂದ ಭವಿಷ್ಯ ನಿಧಿಗಾಗಿ (PF)ಹಣ ಕಡಿತಗೊಳ್ಳುತ್ತಿದ್ದರೆ ಅದನ್ನು ಸುಮ್ಮನೆ ವಿತ್ ಡ್ರಾ ಮಾಡಬಾರದು. ತೀರ ಅಗತ್ಯವಿದ್ದರೆ ಮಾತ್ರ ಪಿಎಫ್ ಅಕೌಂಟ್ನಿಂದ ಹಣ ತೆಗೆಯಬೇಕು. ಆದರೆ ಅದೆಷ್ಟೋ ಜನರು, ಸುಮ್ಮನೆ ಹಣವನ್ನು ತೆಗೆದು ಖರ್ಚು ಮಾಡಿಕೊಳ್ಳುತ್ತಾರೆ. ಇದು ಒಳ್ಳೆಯದಲ್ಲ. ಪಿಎಫ್ ನಿಮ್ಮ ಆಪತ್ಕಾಲಕ್ಕಾಗುವ ಉಳಿತಾಯದ ಹಣ ಆಗಿರುತ್ತದೆ. ಪ್ರತಿ ತಿಂಗಳೂ ಆ ಖಾತೆಯಲ್ಲಿ ಹೆಚ್ಚೆಚ್ಚು ಹಣ ಸಂಗ್ರಹವಾಗುತ್ತದೆ. ಹಾಗೇ ನಿಮ್ಮ ಪಿಎಫ್ ಠೇವಣಿ ಹಣಕ್ಕೆ ಒಳ್ಳೆಯ ಬಡ್ಡಿಯೂ ಸಿಗುತ್ತದೆ.
ಪಿಎಫ್ ಹಣವನ್ನು ಅನಗತ್ಯವಾಗಿ ತೆಗೆಯಬಾರದು. ತೀರ ಅನಿವಾರ್ಯ ಸಂದರ್ಭವಿದ್ದರೆ ಮಾತ್ರ ವಿತ್ ಡ್ರಾ ಮಾಡಿ, ಅದಿಲ್ಲದಿದ್ದರೆ ನಿಮ್ಮ ನಿವೃತ್ತಿಯವರೆಗೂ ಉಳಿಸಿಕೊಳ್ಳುವುದು ಒಳಿತು.
ನಿವೃತ್ತಿಗೆ ಮೊದಲೇ ಪಿಎಫ್ ಹಣ ತೆಗೆದರೆ ಖಂಡಿತ ನಿಮಗೆ ದೊಡ್ಡಪ್ರಮಾಣದಲ್ಲಿ ನಷ್ಟವಾಗುತ್ತದೆ. ಉದಾಹರಣೆಗೆ, ನೀವು ನಿವೃತ್ತಿಗೂ ಮೊದಲು 1 ಲಕ್ಷ ರೂಪಾಯಿ ವಿತ್ ಡ್ರಾ ಮಾಡಿದಿರಿ ಎಂದಾದರೆ, ನಿಮಗೆ 11 ಲಕ್ಷ ರೂಪಾಯಿ ನಷ್ಟ ಆಗುತ್ತದೆ. ಅರೆ ! ಇದು ಹೇಗೆ ಸಾಧ್ಯ? 1 ಲಕ್ಷ ರೂ. ವಿತ್ಡ್ರಾ ಮಾಡಿದರೆ 11 ಲಕ್ಷ ರೂ. ನಷ್ಟ ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಉತ್ತರ..
ನೀವು ನಿವೃತ್ತರಾಗಲು ಇನ್ನೂ 30ವರ್ಷವಿದೆ ಎಂದಿಟ್ಟುಕೊಳ್ಳೋಣ. ಈಗ ನೀವೇನಾದರೂ 1 ಲಕ್ಷ ರೂ.ವಿತ್ ಡ್ರಾ ಮಾಡಿದರೆ ನೀವು 11.55 ಲಕ್ಷ ರೂ.ಕಳೆದುಕೊಂಡಂತೆ ಎನ್ನುತ್ತಾರೆ ನಿವೃತ್ತ ಇಪಿಎಫ್ಒ ನಿವೃತ್ತ ಸಹಾಯಕ ಆಯುಕ್ತ ಎ.ಕೆ. ಶುಕ್ಲಾ. ಒಮ್ಮೆ ಈ ಒಂದು ಲಕ್ಷ ರೂಪಾಯಿ ನಿಮ್ಮ ಪಿಎಫ್ ಅಕೌಂಟ್ನಲ್ಲೇ ಇದ್ದರೆ ಅದಕ್ಕೆ ಬಡ್ಡಿ ಸೇರಿ, 30 ವರ್ಷ, ಅಂದರೆ ನಿಮ್ಮ ನಿವೃತ್ತಿ ಹೊತ್ತಿಗೆ 11.55 ಲಕ್ಷ ರೂ.ಆಗಿರುತ್ತದೆ. ಸದ್ಯ ಪಿಎಫ್ ಹಣಕ್ಕೆ ಶೇ.8.5ರಷ್ಟು ಬಡ್ಡಿದರ ಇದೆ. ಉಳಿದೆಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ, ಪಿಎಫ್ಗೆ ಇರುವಷ್ಟು ಬಡ್ಡಿದರದ ಪ್ರಮಾಣ ಇನ್ಯಾವುದಕ್ಕೂ ಇಲ್ಲ. ಹೀಗಿರುವಾಗ ಪಿಎಫ್ನಲ್ಲಿ ನೀವು ಹೆಚ್ಚೆಚ್ಚು ಹಣ ಸಂಗ್ರಹಿಸಿದಂತೆ ಸಹಜವಾಗಿ ಅದರ ಮೊತ್ತವೂ ಜಾಸ್ತಿಯಾಗುತ್ತ ಹೋಗುತ್ತದೆ.
ನಿವೃತ್ತಿಗೆ 20ವರ್ಷವಿದ್ದಾಗ 50 ಸಾವಿರ ತೆಗೆದರೆ ಏನಾಗುತ್ತದೆ? ನಿವೃತ್ತಿಗೆ ಮೊದಲು ಎಷ್ಟೇ ಹಣ ತೆಗೆದರೂ ದೊಡ್ಡ ಪ್ರಮಾಣದ ನಷ್ಟ ಆಗುವುದರಲ್ಲಿ ಸಂದೇಹವಿಲ್ಲ. ಹಾಗೇ, ನಿವೃತ್ತಿಗೆ 20 ವರ್ಷ ಬಾಕಿ ಇದ್ದಾಗ ಒಮ್ಮೆ ನಿಮ್ಮ ಪಿಎಫ್ ಅಕೌಂಟ್ನಿಂದ 50 ಸಾವಿರ ರೂ. ವಿತ್ಡ್ರಾ ಮಾಡಿದಿರಿ ಎಂದಾದರೆ ಏನಿಲ್ಲವೆಂದರೂ 2 ಲಕ್ಷದ 5 ಸಾವಿರ ರೂ.ನಷ್ಟ ಅನುಭವಿಸುತ್ತೀರಿ. ಹಾಗೇ 1 ಲಕ್ಷ ರೂ.ತೆಗೆದರೆ 5.11 ಲಕ್ಷ ರೂ., 2 ಲಕ್ಷ ರೂ.ಕ್ಕೆ 10.22 ಲಕ್ಷ ರೂ. ಮತ್ತು 3 ಲಕ್ಷಕ್ಕೆ 15.33 ಲಕ್ಷ ರೂ. ನಷ್ಟ ಉಂಟಾಗುವುದು ಗ್ಯಾರಂಟಿ. ಇದೇ ಕಾರಣಕ್ಕೆ ಪಿಎಫ್ ಹಣವನ್ನು ನಿವೃತ್ತಿಗೆ ಮೊದಲು ಅನಗತ್ಯವಾಗಿ ತೆಗೆಯುವ ಮೊದಲು ಒಮ್ಮೆ ಯೋಚಿಸುವುದು ಒಳ್ಳೆಯದು.