
ಹಾಸನ: ಮನೆಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಮಧ್ಯಾಹ್ನ ಪ್ರಕಟಿಸಿದೆ. ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.14 ತಿಂಗಳಿನಿಂದ ಸೆರೆಮನೆ ವಾಸ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಮತ್ತೆ ಜೈಲಿನಲ್ಲಿಯೇ ಕಳೆಯಬೇಕಾಗಿದೆ. ಶಿಕ್ಷೆ ಪ್ರಮಾಣವನ್ನು ಶನಿವಾರದಂದು ಪ್ರಕಟಿಸಲಾಗುವುದು ಎಂದು ಪೀಠ ಹೇಳಿದೆ.ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಸಂತೋಷ್ ಗಜಾನನ ಭಟ್ ಜು.30 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದರು. ಆದರೆ, ಇದೀಗ ಸಿಐಡಿ ತನಿಖಾಧಿಕಾರಿಗಳು ಹಾಗೂ ಆರೋಪಿ ಪರ ವಕೀಲರಿಂದ ಕೆಲವೊಂದು ಸ್ಪಷ್ಟನೆಗೆ ಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಜ್ವಲ್ ರೇವಣ್ಣ ಮೇಲಿದೆ. ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿ ಒಟ್ಟು 9 ಆರೋಪಿಗಳಿದ್ದಾರೆ. ಈಗಾಗಲೇ ರೇವಣ್ಣ ಹಾಗೂ ಭವಾನಿ ರೇವಣ್ಣಗೆ ಜಾಮೀನು ಸಿಕ್ಕಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಕೆಲವು ಸ್ಪಷ್ಟೀಕರಣಗಳು ಬೇಕಾಗಿವೆ. ಹೀಗಾಗಿ ಇಂದು ತೀರ್ಪು ಪ್ರಕಟಿಸುತ್ತಿಲ್ಲ. ಅಶ್ಲೀಲ ವಿಡಿಯೋಗಳು ಪ್ರಜ್ವಲ್ ಮೊಬೈಲ್‌ನಿಂದಲೇ ಆತನ ಚಾಲಕನ ಮೊಬೈಲ್‌ಗೆ ಹೇಗೆ ವರ್ಗಾವಣೆಯಾಯಿತು ಎಂಬ ಸ್ಪಷ್ಟೀಕರಣ ಮತ್ತು ಕೆಲವು ತಾಂತ್ರಿಕ ಕಾರಣದಿಂದ ತೀರ್ಪು ಅನ್ನು ಮುಂದೂಡಲಾಗಿದೆ. ಪ್ರಮುಖವಾಗಿ ತನಿಖಾಧಿಕಾರಿ ಘಟನಾ ಸ್ಥಳ ತೋರಿಸಲು ಬಳಸಿರುವ ಗೂಗಲ್ ಮ್ಯಾಪನ್ನು ಸಾಕ್ಷಿಯಾಗಿ ಪರಿಗಣಿಸಬಹುದೇ ಮತ್ತು ಆರೋಪಿಯಿಂದ ಜಪ್ತಿ ಮಾಡಿರುವ ಮೊಬೈಲ್ ಕುರಿತು ಕೆಲ ವಿವರಣೆ ಬೇಕಿರುವ ಕಾರಣ ತೀರ್ಪು ಮುಂದೂಡಲಾಗಿದೆ.