ಬೆಂಗಳೂರು: ಕನ್ನಡ ಚಿತ್ರರಂಗದ ಒಗ್ಗಟ್ಟಿನ ಹೋರಾಟಕ್ಕೆ ಮಣಿದ ಸರ್ಕಾರ ಏಪ್ರಿಲ್ 7ರವರೆಗೆ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ.
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರನ್ನು ಭೇಟಿ ಮಾಡಿದ್ದ ಪುನೀತ್ ರಾಜಕುಮಾರ್ ಒಳಗೊಂಡ “ಯುವರತ್ನ” ಚಿತ್ರತಂಡ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಅಲ್ಲದೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಸಹ ಈ ಸಂಬಂಧ ಆಗ್ರಹಿಸಿದ್ದರು.
ಸದ್ಯ ಏಪ್ರಿಲ್ 7ರವರೆಗೆ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ನಿನ್ನೆ ರಾಜ್ಯ ಸರ್ಕಾರ ನೂತನ ಕೊರೋನಾ ಮಾರ್ಗಸೂಚಿಯನ್ನು ಹೊರಡಿಸಿತ್ತು. ಇದರಲ್ಲಿ ಬೆಂಗಳೂರು ನಗರ ಸೇರಿ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿತ್ತು.
ಏಪ್ರಿಲ್ 1ರಂದು ತೆರೆಕಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ “ಯುವರತ್ನ” ಚಿತ್ರತಂಡಕ್ಕೆ ಇದರಿಂದ ಭಾರೀ ಅಸಮಾಧಾನ ಉಂಟಾಗಿತ್ತು.