ರಾಯಚೂರು: ಮಂತ್ರಾಲಯಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ತೊಟ್ಟಿಲು ಮತ್ತು ವೀಣೆ ಅಲುಗಾಡಿತ್ತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಸಾವಿಗೂ ಇದಕ್ಕೂ ಸಂಬಂಧ ಇರುವಂತೆ ಊಹಾಪೋಹ ಹಬ್ಬಿಸಿದ್ದಾರೆ. ಈ ಬಗ್ಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಮಾತನಾಡಿದ್ದು, ಅವರ ಸಾವಿಗೂ ಇದಕ್ಕೂ ಸಂಬಂಧವಿಲ್ಲ. ಅದು ಆಕಸ್ಮಿಕವಾಗಿ ಆಗಿರುವ ಘಟನೆ ಎಂದು ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ಮಂತ್ರಾಲಯದ ರಾಯರ ಪರಮ ಭಕ್ತರಾಗಿದ್ದರು. ಅಣ್ಣ ತಮ್ಮಂದಿರು ಬಂದು ಸಂಗೀತ ಸೇವೆ ಮಾಡುವುದಾಗಿ ಹೇಳಿದ್ದರು. ಅವರು ರಾಯರ ಅನುಗ್ರಹದಿಂದಲೇ ಜನಿಸಿದ್ದಾರೆ ಎಂದು ಅವರ ತಂದೆ ಹೇಳಿದ್ದರು. ತಮ್ಮ ನೆಚ್ಚಿನ ಗುರುಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಾಗ ಪುನೀತ್ ಹಾಡು ಹಾಡಿದ್ದರು. ಯಾರೂ ಕೂಡಾ ಅನ್ಯತಾ ಭಾವಿಸವಾರದು. ಇದೊಂದು ಕಾಕತಾಳೀಯ. ಸಾವಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಮಾಹಿತಿ ನೀಡಿದ್ದಾರೆ.