ಕೊಡಗು: ಕೊಡಗು, ಹಾಸನ ಜಿಲ್ಲೆಗಳ ಕೆಲ ಭಾಗಗಳಲ್ಲಿ ಇಂದು ಆಲಿಕಲ್ಲುಸಹಿತ ಭಾರಿ ಮಳೆಯಾಗಿದೆ.
ಕೊಡಗಿನ ಶನಿವಾರ ಸಂತೆ, ಸೋಮವಾರಪೇಟೆ ಹಾಗೂ ಹಾಸನದ ಅರಕಲಗೂಡಿನ ಹಲವೆಡೆ ಇಂದು ಆಲಿಕಲ್ಲುಸಹಿತ ಮಳೆ ಅಬ್ಬರಿಸಿದೆ.
ಮಂಜಿನ ಮಳೆಯಂತೆ ಗೋಲಿ ಗಾತ್ರದ ರಾಶಿ ರಾಶಿ ಆಲಿಕಲ್ಲುಗಳು ಬಿದ್ದಿವೆ.
ಶನಿವಾರಸಂತೆ, ಸೋಮವಾರಪೇಟೆಯ ಅಂಕನಹಳ್ಳಿ, ನಿಡ್ತ, ಮೆಣಸ ಗ್ರಾಮಗಳಲ್ಲಿ ಬೆಳ್ಮುಗಿಲೇ ಧರೆಗೆ ಚಾಚಿದಂತೆ ಆಲಿಕಲ್ಲು ಸುರಿದಿದೆ.
ಮಧ್ಯಾಹ್ನದ ವೇಳೆ ಆರಂಭವಾದ ಆಲಿಕಲ್ಲು ಮಳೆ, ಸುಮಾರು ಅರ್ಧ ಗಂಟೆಗಳ ಕಾಲ ಸುರಿದಿದ್ದರಿಂದ ರಸ್ತೆಯೆಲ್ಲಾ ಬಿಳಿಯಾಗಿ ಗೋಚರಿಸಿತು.
ಆಲಿಕಲ್ಲುಸಹಿತ ಮಳೆಯಿಂದಾಗಿ ಕಾಳುಮೆಣಸು, ಕಾಫಿ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ.