ಮುಂಜಾನೆಯಿಂದ ತುಂತುರು ಮಳೆ! ರಾಜ್ಯದ ಹಲವೆಡೆ ಮುಂದಿನ 5ದಿನ ಮಳೆಯಾಗುವ ಸಾಧ್ಯತೆ!

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕೇರಳ, ತಮಿಳುನಾಡಿನಲ್ಲಿ ಚಂಡಮಾರುತ ಎದ್ದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಹಲವು ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಇಂದು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್​ಗೆ ಕರೆ ನೀಡಿವೆ. ಇಂದಿನ ಭಾರತ್ ಬಂದ್​ನ ನಡುವೆ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ತುಂತುರು ಮಳೆ ಶುರುವಾಗಿದೆ. ಬೆಳಗ್ಗೆಯಿಂದ ಸತತ 4 ಗಂಟೆಯಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗಿರುವ ಭಾರತ್​ ಬಂದ್​ಗೆ ಮಳೆಯಿಂದ ಅಡ್ಡಿಯಾಗುವ ಸಾಧ್ಯತೆ ಎದುರಾಗಿದೆ.

ಬೆಂಗಳೂರಿನ ದಾಸರಹಳ್ಳಿ, ಪೀಣ್ಯ, ಗೊರಗುಂಟೆಪಾಳ್ಯ, ಬಸವನಗುಡಿ, ಚಾಮರಾಜಪೇಟೆ, ಮೈಸೂರು ರಸ್ತೆ, ನೆಲಮಂಗಲ, ತುಮಕೂರು ಸೇರಿದಂತೆ ವಿವಿಧೆಡೆ ಮುಂಜಾನೆಯಿಂದಲೇ ವರುಣನ ಸಿಂಚನವಾಗಿದೆ.

READ ALSO

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದ ಕರಾವಳಿ ತೀರಕ್ಕೆ ಬುರೇವಿ ಚಂಡಮಾರುತ ಅಪ್ಪಳಿಸಿದೆ. ಇದರಿಂದ ಇನ್ನೂ 5 ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆಯಿದೆ.

ರಾಜ್ಯದ ಕರಾವಳಿ ತೀರ ಹಾಗೂ ದಕ್ಷಿಣ ಒಳನಾಡಿನಲ್ಲಿ ಡಿ. 12ರವರೆಗೂ ಮಳೆ ಸುರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇನ್ನು 5 ದಿನಗಳ ಕಾಲ ಅಂದರೆ ಡಿ. 12ರವರೆಗೂ ಮಳೆಯಾಗಲಿದೆ.