ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಮಂಗಳವಾರ ಸಂಜೆ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ನೆರೆನೀರು ಉಕ್ಕಿಬಂದು ಪಿಕಪ್ ವಾಹನ ನೀರಿನಲ್ಲಿ ಮುಳುಗಿದ ಘಟನೆ ವರದಿಯಾಗಿದೆ.
ಪಿಕಪ್‌ನಲ್ಲಿದ್ದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದರು. ವಾಹನಕ್ಕೆ ಹಗ್ಗದಿಂದ ಕಟ್ಟಿ ನೀರು ಪಾಲಾಗದಂತೆ ತಡೆದರು. ಬಳಿಕ ಸ್ಥಳೀಯರೆಲ್ಲಾ ಸೇರಿ ವಾಹನವನ್ನು ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಅಳದಂಗಡಿಯ ಸದಾನಂದ ಅವರ ಪಿಕಪ್ ವಾಹನದಲ್ಲಿ ದಯಾನಂದ ಅವರ ಮನೆಗೆ ಸೆಂಟ್ರಿಂಗ್ ಪರಿಕರಗಳನ್ನು ಕೊಟ್ಟು ಹಿಂದೆ ಬರುವಾಗ ಈ ಘಟನೆ ನಡೆದಿದೆ. ವಾಹನ ನದಿಗೆ ಇಳಿಯುತ್ತಿದ್ದಂತೆ, ಒಮ್ಮೆಲೆ ನೀರು ಉಕ್ಕಿ ಬಂತು.
ಕಕ್ಕಿಂಜೆಯ ವಿಕಾಯ ತಂಡ ಮತ್ತು ಸ್ಥಳೀಯ ಯುವಕರ ತಂಡದ ಸದಸ್ಯರು ಪಿಕಪ್ ವಾಹನವನ್ನು ನದಿಯಿಂದ ಮೇಲೆತ್ತುವಲ್ಲಿ ಸಹಕರಿಸಿದರು.