ಶಿಡ್ಲಘಟ್ಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಿಡ್ಲಘಟ್ಟ ತಾಲೂಕಿನ ಬೈರಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಸಸಿ ನಾಟಿ ಕಾರ್ಯಕ್ರಮ ನಡೆಸಲಾಯಿತು.
ಧರ್ಮಸ್ಥಳ ಸಂಸ್ಥೆಯ ಕೃಷಿ ಮೇಲ್ವಿಚಾರಕರಾದ ಹರೀಶ್ ರವರು ಮಾತನಾಡುತ್ತಾ ನಾವೆಲ್ಲರೂ ಸೇರಿಕೊಂಡು ಪರಿಸರವನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು ನಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಗಿಡಗಳನ್ನು ಬೆಳೆಸಿ ಪರಿಸರವನ್ನು ಉಳಿಸಿ ಕೊಳ್ಳ ಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಮನೆಯಲ್ಲಿ ಒಂದು ಸಸಿಯನ್ನು ನೆಟ್ಟು ಮಕ್ಕಳಂತೆ ಬೆಳೆಸಿ ಪೋಷಿಸಿದರೆ ಮುಂದೊಂದು ದಿನ ಶುದ್ಧ ಗಾಳಿಯನ್ನು ನೀಡುವ ಮುಖಾಂತರ ಇಡೀ ಕುಟುಂಬಕ್ಕೆ ನೆರಳನ್ನು ಕೊಡುವ ದೊಡ್ಡ ಮರವಾಗಿ ಬೆಳೆಯುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭಾಕರ್ ರೆಡ್ಡಿ ಮಾತನಾಡುತ್ತ ಧರ್ಮಸ್ಥಳ ಯೋಜನೆಯೂ ಹಲವಾರು ಜನಪರ ಕಾಳಜಿಯುಳ್ಳ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಶ್ಲಾಘನೀಯವಾದ ಕಾರ್ಯವಾಗಿದೆ ಈ ದಿನ ನಮ್ಮ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಾಡಿದ್ದು ಈ ಕಾರ್ಯಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ರವಿಕುಮಾರ್. ಸೇವಾ ಪ್ರತಿನಿಧಿ ಮೂರ್ತಿ ಸಂಘದ ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.