ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತಂದ ಕಬ್ಬಡ್ಡಿ ಪಟು ಶಶಿಧರನ್ ಈಗಿನ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಬೆಳಕು

ಈಗಿನ ಆಧುನಿಕ ಡಿಜಿಟಲ್‌ ಕಾಲದಲ್ಲಿ ವ್ಯಕ್ತಿಯೊಬ್ಬನ ಕೀರ್ತಿ ಮತ್ತು ಸಾಧನೆಗಳ ಪ್ರಚಾರ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಪಂಚದ ಉದ್ದಗಲಕ್ಕೂ ಪಸರಿಸಬಲ್ಲುದು..ಸಣ್ಣ ಸಾಧನೆಯು ಕೂಡಾ ಎಲ್ಲೋ ಮೂಲೆಯಲ್ಲಿ ಕುಳಿತವ ಗಮನಿಸಿ, ಪ್ರಶಂಸಿಸಬಲ್ಲ, ಆದರೆ ಹಿಂದಿನ ಕಾಲವನ್ನೊಮ್ಮೆ ಊಹಿಸೋಣ ಎಂತೆಂತಹ ಸಾಧಕರು ನಮ್ಮ ನಡುವೆ ಇದ್ದವರೆಷ್ಟೊ,ಬಾಳಿ ಬದುಕಿಕಣ್ಮರೆಯಾದವರೆಷ್ಟೊ… ಪ್ರಚಾರದ ಕೊರತೆಯಿಂದ ಯಾರಿಗೂ ಕಾಣದೆ ಇದ್ದವರೆಷ್ಟೊ ಜನ, ಅಂತಹ ಪ್ರಚಾರವಿಲ್ಲದ, ಕ್ರೀಡಾ ಸಾಧಕನ ಪರಿಚಯವಿದು ಅವರೇ ದೈಹಿಕ ನಿರ್ದೇಶಕ ಶಶಿಧರ್ ಮಾಣಿ.
ಇವರು ಎಸ್ಎಂ ಕೊರಗಪ್ಪ ಮತ್ತು ವೆಂಕಮ್ಮ ದಂಪತಿಗಳ ಪುತ್ರರಾಗಿ ಮಾಣಿ ಸಮೀಪದ ಬರಿಮಾರು ಗ್ರಾಮದ ಶೇರಾದಲ್ಲಿ ಜನಿಸಿ, ಪ್ರಾಥಮಿಕ ಶಿಕ್ಷಣ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿ ಮತ್ತು ಪ್ರೌಢ ಶಿಕ್ಷಣ ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಮುಗಿಸಿ ಪಿಯುಸಿ ಮತ್ತು ಪದವಿಯನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪೂರೈಸಿ, ಎಂಪಿಎಡ್ ನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಾಗೂ ಎಂಫಿಲ್ ಪದವಿಯನ್ನು ಅಣ್ಣಾಮಲೈ ಯೂನಿವರ್ಸಿಟಿ ಚಿದಂಬರಂ ತಮಿಳುನಾಡಿನಿಂದ ಪಡೆದ ಇವರು, ತನ್ನ ಶಾಲಾ ದಿನಗಳಿಂದ ಹಿಡಿದು ಸ್ನಾತಕೋತ್ತರ ದ ವರೆಗೂ ಕಬಡ್ಡಿಯ ಗಟ್ಟಿ ಹಿಡಿತದಲ್ಲಿ ಅದ್ವಿತೀಯ ಸಾಧನೆ ತೋರಿದ ಕ್ರೀಡಾಳು.

READ ALSO


ಇವರ ಸಾಧನೆಗಳು: 1986-87 ರ ಇಸವಿಯಲ್ಲಿ ಹೈಸ್ಕೂಲಿನಲ್ಲಿರುವಾಗ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ ಇವರು 1990-91ರಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾಲಯ ಪಂದ್ಯಾಟದಲ್ಲಿ ಪ್ರಥಮ ಸ್ಥಾನದೊಂದಿಗೆ ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಪ್ರಶಸ್ತಿ ಗಳಿಸಿದ ಅದ್ಭುತವಾದ ಆಟಗಾರ. ಒಡಿಸ್ಸಾ ದ ದಾನೇಶ್ವರ ದಲ್ಲಿ ನಡೆದ ಅಖಿಲ ಭಾರತ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಶಿಪ್ ಅನ್ನು ಪಡೆದುಕೊಂಡ ತಂಡದ ಶ್ರೇಷ್ಠ ಆಟಗಾರ ನಮ್ಮ ಶಶಿಯಣ್ಣ. 1990-91 ರಲ್ಲಿ ಕಬಡ್ಡಿಯ ಜೊತೆಗೆ ಡೆಕತ್ಲಾನ್ ನಲ್ಲಿ ಸ್ಪರ್ಧಿಸಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲು ಆಯ್ಕೆಯಾದವರು. 1993-94 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ನಾಯಕನಾಗಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಮುನ್ನಡೆಸಿದ ಅನುಭವಿ. ಈ ನಡುವೆ ತಾನು ಬೆಳೆದ ಮಾಣಿ ‌ಪರಿಸರದ ಯುವಕರನ್ನು ಹಿರಿಯ ಕಬಡ್ಡಿ ಆಟಗಾರರಾದ ದಾಮ್ಮಣ್ಣರ ನೇತೃತ್ವದಲ್ಲಿ ಕಟ್ಟಿಕೊಂಡು ಜಿಲ್ಲೆಯಷ್ಟೆ ಅಲ್ಲದೆ ನೆರೆಯ ಉಡುಪಿ,ಕೇರಳದಲ್ಲೂ ಪ್ರಶಸ್ತಿ ಬಾಚಿಕೊಂಡು ಆಲ್ ರೌಂಡರ್ ಆಗಿ ಮೆರೆದ ಶಶಿಯಣ್ಣ, ರಾಷ್ಟ್ರಮಟ್ಟದಲ್ಲಿ ಆಡಲು ಕರ್ನಾಟಕ ರಾಜ್ಯ ತಂಡಕ್ಕೆ ಅಂತಿಮ ಹಂತದವರೆಗೂ ಆಯ್ಕೆಯಾಗಿ ಕೆಲವೊಂದು ಕಾರಣಗಳಿಂದ ಹೊರಗುಳಿದವರು.(ವ್ಯವಸ್ಥೆಯ ತಪ್ಪಿನಿಂದಾಗಿ!!) ಒಂದು ಪಂದ್ಯದಲ್ಲಂತೂ ತನ್ನ ಮೊಣಕಾಲಿನ ಚಿಪ್ಪಿನ ಗಾಯದಿಂದ ಮುಂದೆ ಆಪರೇಷನ್‌ ಗೆ ಒಳಪಟ್ಟು ನಂತರದ ದಿನಗಳಲ್ಲಿ ಕಬಡ್ಡಿ ಯಿಂದ ಹಿಮ್ಮುಖರಾಗಿ ವಾಲಿಬಾಲ್ ನತ್ತ ಮುಖಮಾಡಿ ಅಲ್ಲಿಯೂ ಸೈ ಎನಿಸಿಕೊಂಡು ರಾಜ್ಯಮಟ್ಟದಲ್ಲಿ ಮಿಂಚಿದವರು. ಹಲವಾರು ವರ್ಷ ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ತರಬೇತುದಾರನಾಗಿ ಮತ್ತು ಆಯ್ಕೆ ಸಮಿತಿ ಸದಸ್ಯನಾಗಿ ಸಹಕರಿಸಿದವರು. ಅಷ್ಟೇ ಅಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಸಂಯೋಜಕರಾಗಿ ಕೆಲಸವನ್ನು ನಿರ್ವಹಿಸಿದ ಅನುಭವ ಹೊಂದಿರುವ ಇವರು ಪ್ರಸ್ತುತ ರಾಜ್ಯದ ಕೆಲವೇ ಕೆಲವು ಅತ್ಯುತ್ತಮ ತೀರ್ಪುಗಾರರಲ್ಲಿ ಓರ್ವರಾಗಿ, ಅದೆಷ್ಟೋ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ ಕಬಡ್ಡಿ ತಾರೆಗಳನ್ನು ನಿರ್ಮಿಸಿ, ಅದ್ಭುತ ಕೋಚ್ ಆಗಿ, ಗಣಪತಿ ಕಾಲೇಜು ಮಂಗಳೂರಿನ ಹೆಸರಾಂತ ದೈಹಿಕ ಶಿಕ್ಷಕರಾಗಿ ಆ ಕಾಲೇಜನ್ನು ಯುನಿವರ್ಸಿಟಿ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಗುರುತಿಸಿದವರು. ತನ್ನ ಹುಟ್ಟೂರಿನಲ್ಲಿರುವ, ವಾಲಿಬಾಲ್ ನ ಇತಿಹಾಸದಲ್ಲಿ ಹೆಸರುಗಳಿಸಿದ ಉದಯ ಯುವಕ ಮಂಡಲ ಶೇರಾ ದ ಕ್ರೀಡಾಸಲಹೆಗಾರರು ಆಗಿದ್ದು, ಪೆರಾಜೆ ,ಮಾಣಿ , ಕಡೆಶಿವಾಲಯ,ಬರಿಮಾರು ಸೇರಿದಂತೆ ಹಲವಾರು ಕಡೆ ಕ್ರೀಡಾಪಟುಗಳನ್ನು ಕಬಡ್ಡಿ,ವಾಲಿಬಾಲ್ ರಂಗದಲ್ಲಿ ಮಿಂಚುವಂತೆ ಸಜ್ಜುಗೊಳಿಸಿದವರು.(ನನಗೂ ಒಂದೊಮ್ಮೆ ಕಬಡ್ಡಿ ಪಾಠ ಮಾಡಿದ್ದ ಗುರುಗಳು…)
ಪ್ರಚಾರವಿಲ್ಲದೆ ಪ್ರಜ್ವಲಿಸಿ ಮೆರೆದ ಕ್ರೀಡಾ ಪ್ರತಿಭೆ ಶಶಿಯಣ್ಣನಿಗೆ ದೊಡ್ಡದೊಂದು ಸೆಲ್ಯೂಟ್, ನಿಮ್ಮಿಂದ ಇನ್ನಷ್ಟು ಪ್ರತಿಭೆಗಳು ಬೆಳೆದು ರಾಜ್ಯ, ರಾಷ್ಟ್ರದಲ್ಲಿ ಹೆಸರು ಗಳಿಸಲಿ ಎಂಬ ಆಶಯದೊಂದಿಗೆ…..

🖋️ ಹರೀಶ್ ಮಂಜೊಟ್ಟಿ…