TRENDING
Next
Prev

ನಿರಂತರವಾಗಿ ಶುದ್ಧ ಕುಡಿಯುವ ನೀರು ಪಡೆಯಲು 40 ಶುದ್ಧಗಂಗಾ ಘಟಕಗಳಿಗೆ ಸೋಲಾರ್ ಇನ್ವರ್ಟರ್ ಅಳವಡಿಕೆ: ಧರ್ಮಾಧಿಕಾರಿ‌ ಡಾ. ವೀರೇಂದ್ರ ಹೆಗ್ಗಡೆ ಹೇಳಿಕೆ: ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಜೊತೆ ಒಡಂಬಡಿಕೆ ಪತ್ರ ವಿನಿಮಯ: ₹ 2.40 ಕೋಟಿ ವೆಚ್ಚದಲ್ಲಿ 40 ಘಟಕಗಳಿಗೆ ಅಳವಡಿಕೆ

ಧರ್ಮಸ್ಥಳ: ರಾಜ್ಯದ ಬಯಲು ಸೀಮೆ‌ ಜಿಲ್ಲೆಗಳ‌ ಜನತೆಗೆ ಶುದ್ಧ ಕುಡಿಯುವ ನೀರು‌ ಒದಗಿಸುವ ಸಲುವಾಗಿ‌ ಶುದ್ಧ ಗಂಗಾ ಘಟಕ‌ ಸ್ಥಾಪಿಸಲಾಗಿದೆ. ಈ ಮೂಲಕ ಜನತೆ ಉತ್ತಮ ಆರೋಗ್ಯ‌ ಪಡೆಯುವಂತಾಗಿದೆ. ‌ಆದರೆ ಕೆಲವು ಘಟಕಗಳಲ್ಲಿ‌ ಪವರ್ ಕಟ್ ನಂತಹಾ‌ ಸಮಸ್ಯೆಯಿಂದ ಮುಕ್ತಿ‌ ಪಡೆಯಲು‌, ಸೋಲಾರ್ ಜೋಡಣೆ ಮಾಡಲಾಗುತ್ತಿದೆ.‌‌ ಆರಂಭದಲ್ಲಿ ಸೆಲ್ಕೋ ಪೌಂಡೇಶನ್ ಇದೀಗ ಆಯ್ದ 40 ಶುದ್ಧಗಂಗಾ ಘಟಕಗಳಿಗೆ ಉಚಿತ ಸೋಲಾರ್‌ ಇನ್ವರ್ಟರ್ ಅಳವಡಿಸಲು ಇಚ್ಛಿಸಿದ್ದಾರೆ. ಪ್ರತೀ ಘಟಕಕ್ಕೆ ಸುಮಾರು ರೂ. 5.00 ಲಕ್ಷ ವೆಚ್ಚವಾಗುವ ಈ ಯೋಜನೆಯಂತೆ ಸುಮಾರು 40 ಘಟಕಗಳಿಗೆ ರೂ. 2.40 ಕೋಟಿ ವೆಚ್ಚ ತಗುಲಲಿದೆ. ಈ ವೆಚ್ಚವನ್ನು ಪೂರ್ತಿಯಾಗಿ ಸೆಲ್ಲೋ ಫೌಂಡೇಶನ್ ಭರಿಸಲಿದೆಯಲ್ಲದೇ ಮುಂದಿನ ಒಂದು ವರ್ಷದವರೆಗೆ ನಿರ್ವಹಣೆಯನ್ನೂ ಉಚಿತವಾಗಿ ಮಾಡಲಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಬೀಡಿನಲ್ಲಿ‌ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ‌ಒಡಂಬಡಿಕೆ‌ ಹಸ್ತಾಂತರ ಕಾರ್ಯಕ್ರಮದಲ್ಲಿ‌ ಭಾಗವಹಿಸಿ‌ ಮಾತನಾಡಿದರು.

ರಾಜ್ಯದಾದ್ಯಂತ ಕಡುಬಡವರಿಗೂ ಅತೀ ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರನ್ನು ಶುದ್ಧ ಗಂಗಾ ಮೂಲಕ ಒದಗಿಸಲಾಗುತ್ತಿತ್ತು. ಯೋಜನೆಯ ಈ ಮಹತ್ವಾಕಾಂಕ್ಷಿ ಯೋಜನೆ ಗಮನಿಸಿ, ಸೆಲ್ಕೋ‌ಸೋಲಾರ್ ಈ‌ ಹೊಸ ಯೋಜನೆ ರೂಪಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಪೂರ್ಣ ಸೋಲಾರ್‌ನಿಂದಲೇ ನಡೆಸುವ ಹೊಸ ಪ್ರಯತ್ನ ಇದಾಗಲಿದ್ದು, ಪವರ್ ಕಟ್ ಇದ್ದರೂ ಜನತೆಗೆ ಯಾವುದೇ ಸಮಸ್ಯೆ ಎದುರಾಗದೆ ನಿರಂತರವಾಗಿ ಕುಡಿವ ನೀರನ್ನು ಪಡೆಯಬಹುದಾಗಿದೆ ಎಂದರು.

READ ALSO


ಸೆಲ್ಕೋ ಫೌಂಡೇಶನ್ ಸಿ.ಇ.ಓ. ಡಾ. ಹರೀಶ್ ಹಂದೆ ಮಾತನಾಡಿ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಈಗಾಗಲೇ ‌ಹಳ್ಳಿ ಹಳ್ಳಿಗಳಲ್ಲಿ ಸೌರ ವಿದ್ಯುತ್ ಬಳಕೆ ಜಾರಿಗೊಂಡಿತ್ತು. ಇದೀಗ ಪ್ರಥಮವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶುದ್ಧ ಗಂಗಾ 40 ಘಟಕಗಳಿಗೆ ‌ಸೋಲಾರ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮುಂದೆ ಇದು ವಿಸ್ತರಣೆಯಾಗುವ ಸಾಧ್ಯತೆ ಇದೆ. ಅದೇ ರೀತಿ ವಿವಿಧ ವಿಚಾರಗಳಿಗೆ ‌ಸೌರ ವಿದ್ಯುತ್ ‌ಘಟಕ ಬಳಕೆಯ ಕುರಿತು ‌ಸಂಶೋಧನೆಗಳು ನಡೆಯುತ್ತಿವೆ ಎಂದರು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಮಕ್ಷಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್. ಮಂಜುನಾಥ್ ಸಸ್ಟೈಯ್ನ್ ಪ್ಲಸ್ ನಿರ್ದೇಶಕ ಹಾಗೂ ಸೋಷಿಯಲ್ ಆಲ್ಫಾ ಹಾಗೂ ಮನೋಜ್ ಕುಮಾರ್ ಒಪ್ಪಂದ ಪತ್ರಗಳ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸೆಲ್ಕೋ ಫೌಂಡೇಶನ್ ಸಿ.ಇ.ಓ. ಡಾ. ಹರೀಶ್ ಹಂದೆ, ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಸೆಲ್ಕೋ ಸೋಲಾರ್‌ನ ಸಿ.ಇ.ಓ. ಮೋಹನ ಭಾಸ್ಕರ ಹೆಗಡೆ, ಪ್ರಧಾನ ವ್ಯವಸ್ಥಾಪಕ ಜಗದೀಶ್ ಪೈ, ಯೋಜನೆ ಪ್ರಾದೇಶಿಕ ಹಣಕಾಸು ನಿರ್ದೇಶಕ ಶಾಂತರಾಮ ಪೈ, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ಸೆಲ್ಕೊ ಸೋಲಾರ್‌ನ ಗುರುಪ್ರಕಾಶ್ ಶೆಟ್ಟಿ, ಸಸ್ಟೈನ್ ಪ್ಲಸ್‌ನ ಸುಪ್ರಿಯಾ ಗೌಡ, ಶುದ್ಧಗಂಗಾ ವಿಭಾಗದ ನಿರ್ದೇಶಕ ಲಕ್ಷ್ಮಣ್ ಎಂ., ಯೋಜನಾಧಿಕಾರಿ ಯುವರಾಜ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.