
ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಂತ್ರಿಕ ವೃತ್ತಿಪರ ಶಿಕ್ಷಣಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್ ರವರು ಉದ್ಘಾಟಿಸಿದ್ದರು.

ಬಳಿಕ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಇದ್ದಲ್ಲಿ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ನಾನು ಉಜಿರೆಯ SDM ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದು ಈ ಹುದ್ದೆಗೆ ಬರುವಲ್ಲಿ ನೆರವಾಗಿದೆ. ಇದರಲ್ಲೂ ಪ್ರಮುಖವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಾದ್ಯಂತ ಸಮಾಜದ ಕಟ್ಟಕಡೆಯ ಲ್ಲಿರುವ ಕುಟುಂಬಕ್ಕೂ ವಿವಿಧ ರೀತಿಯಲ್ಲಿ ಸಹಾಯ ಆಗುತ್ತಿದ್ದು ಮಹಿಳೆಯರು ಸ್ವಾವಲಂಬಿಯಾಗಿ ಬದುಕುವುದಕ್ಕೆ ಬೇಕಾದ ಎಲ್ಲಾ ಅವಕಾಶಗಳನ್ನು ಈ ಸಂಸ್ಥೆ ನೀಡುತ್ತಿದೆ. ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಇದರೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಶೈಕ್ಷಣಿಕ ಜೀವನದಲ್ಲಿ ಕೇವಲ ಅಂಕಗಳ ಹಿಂದೆ ಹೋಗದೇ ಮಾನವೀಯ ಮೌಲ್ಯಗಳನ್ನು ತಮ್ಮಲ್ಲಿ ಆಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜದ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿ ಜೊತೆಗೆ ವ್ಯಸನ ಮುಕ್ತ ಮಾಡುವಲ್ಲಿ ತಾವೆಲ್ಲರೂ ಕೈಜೋಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಮುಂದೆ ಬರಬೇಕು ಎಂದು ಶುಭಹಾರೈಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸುರೇಶ್ ಮೊಯ್ಲಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕಾಗಿ ಹತ್ತಾರು ಯೋಜನೆಗಳನ್ನು ರೂಪಿಸಿ ಸಹಕಾರ ನೀಡುತ್ತಿದೆ. ಅಲ್ಲದೆ 12 ವರ್ಷದಿಂದ ಹಾಸನ ಜಿಲ್ಲೆಯಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಅರ್ಥಿಕ, ಪರಿಸರ, ನೀರಾವರಿ ಸೇರಿದಂತೆ ಹಲವಾರು ತೀತಿಯಲ್ಲಿ ಕೆಲಸ ಮಾಡುತ್ತಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಆಶೋತ್ತರದಂತೆ 8 ವರ್ಷದಿಂದ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ 943 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗಿದೆ. ಸಕಲೇಶಪುರ ತಾಲೂಕಿನಲ್ಲಿ 157 ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಈ ಶಿಷ್ಯವೇತನ ಪಡೆದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉನ್ನತ ವ್ಯಾಸಂಗ ಮಾಡಿ ದೊಡ್ಡ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರಪತಿ ಸೇವಾ ಚಿನ್ನದ ಪದಕ ಗೌರವಕ್ಕೆ ಆಯ್ಕೆಯಾದ ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್ ರವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ.ನವೀನ್ ಚಂದ್ರ ಶೆಟ್ಟಿ, ಸದಸ್ಯರಾದ ಗಿರೀಶ್ ಮಂಜುನಾಥ್,ಜಿಲ್ಲಾ ನಿರ್ದೇಶಕರಾದ ಸುರೇಶ್ ಮೊಯ್ಲಿ , ತಾಲೂಕಿನ ಯೋಜನಾಧಿಕಾರಿ ರಾಜೇಶ್ ಎಂ ಕಾನರ್ಪ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.