
ದಕ್ಷಿಣ ಕೊರಿಯಾದಲ್ಲಿ ವಿಮಾನವೊಂದು ಪತನಗೊಂಡಿರುವ ಘಟನೆಯೊಂದು ಇಂದು ಬೆಳಗ್ಗೆ ನಡೆದಿತ್ತು. ದಕ್ಷಿಣ ಕೊರಿಯಾದ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್‌ವೇಯಿಂದ ಜಾರಿದ ನಂತರ ವಿಮಾನವೊಂದು ಬೆಂಕಿಗೆ ಆಹುತಿಯಾಗಿ 179 ಜನರು ಸಾವನ್ನಪ್ಪಿದ್ದಾರೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜೆಜು ಏರ್ ವಿಮಾನ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಾಗ ರನ್ ವೇಯಿಂದ ಜಾರಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತಕ್ಕೀಡಾದ ವಿಮಾನವು ಜೆಜು ಏರ್‌ನ ಬೋಯಿಂಗ್ 737-800 ಎಂದು ವರದಿಯಾಗಿದೆ. 175 ಪ್ರಯಾಣಿಕರು ಮತ್ತು 6 ಫ್ಲೈಟ್ ಅಟೆಂಡೆಂಟ್‌ಗಳನ್ನು ಹೊತ್ತ ಜೆಜು ಏರ್ ವಿಮಾನವು ಥಾಯ್ಲೆಂಡ್‌ನಿಂದ ಹಿಂತಿರುಗುತ್ತಿದ್ದಾಗ ಲ್ಯಾಂಡಿಂಗ್ ಸಮಯದಲ್ಲಿ ಪತನಗೊಂಡಿದೆ.
ದಕ್ಷಿಣ ಕೊರಿಯಾದ ಸುದ್ದಿ ಸಂಸ್ಥೆ ಯೋನ್ಹಾಪ್ ವರದಿಯ ಪ್ರಕಾರ, ಪಕ್ಷಿಗಳ ಡಿಕ್ಕಿಯಿಂದಾಗಿ ವಿಮಾನದ ಲ್ಯಾಂಡಿಂಗ್ ಪರಿಣಾಮ ಬೀರಿರಬಹುದು. ಇದರಿಂದಾಗಿ ಲ್ಯಾಂಡಿಂಗ್ ಗೇರ್ ಒಡೆದು ಬೆಂಕಿ ಹೊತ್ತಿಕೊಂಡಿದೆ. ಯೋನ್ಹಾಪ್ ವರದಿಯ ಪ್ರಕಾರ, ಲ್ಯಾಂಡಿಂಗ್ ಗೇರ್ ವಿಫಲವಾದ ನಂತರ ಪೈಲಟ್ ನೇರವಾಗಿ ವಿಮಾನವನ್ನು ಇಳಿಸಲು ನಿರ್ಧರಿಸಿದರು. ತುರ್ತು ಭೂಸ್ಪರ್ಶದ ವೇಳೆ ವಿಮಾನದ ವೇಗವನ್ನು ಕಡಿಮೆ ಮಾಡಲು ಸಾಧ್ಯವಾಗದೆ ರನ್ ವೇಯ ತುದಿಯನ್ನು ತಲುಪಿತ್ತು. ವಿಮಾನ ನಿಲ್ದಾಣದ ಕೊನೆಯಲ್ಲಿ ಬೇಲಿಗೆ ಅಪ್ಪಳಿಸಿ ವಿಮಾನವು ಬೆಂಕಿ ಹೊತ್ತಿಕೊಂಡಿತು.
ಮಾಹಿತಿಯ ಪ್ರಕಾರ, 175 ಪ್ರಯಾಣಿಕರಲ್ಲಿ 173 ಮಂದಿ ಕೊರಿಯನ್ ಪ್ರಜೆಗಳು. 2 ಥಾಯ್ ಪ್ರಜೆಗಳಿದ್ದರು.