“ಮಾನವನನ್ನು ನಿರ್ನಾಮ ಮಾಡುವ ಶಕ್ತಿ ತ್ಯಾಜ್ಯಕ್ಕಿದೆ” : ಡಾ.ಎಲ್.ಎಚ್ ಮಂಜುನಾಥ್

ಬೆಳ್ತಂಗಡಿ : ತ್ಯಾಜ್ಯಗಳಿಂದ ಅನೇಕ ಸಮಸ್ಯೆಗಳನ್ನು ಮಾನವ ಜನಾಂಗ ತಂದುಕೊಂಡಿದೆ. ಮಾರಣಾಂತಿಕ ರೋಗಗಳು ಬಂದಿರುವುದು ಸ್ವಚ್ಚತೆಯ ಕೊರತೆಯಿಂದ. ಹಾಗಾಗಿ ಮಾನವನನ್ನು ನಿರ್ನಾಮ ಮಾಡುವ ಶಕ್ತಿ ತ್ಯಾಜ್ಯಕ್ಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್ ಮಂಜುನಾಥ್ ಹೇಳಿದರು.

READ ALSO

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಚ್ಚತಾ ಜಾಗೃತಿ ವೇದಿಕೆ, ಬೆಳ್ತಂಗಡಿಯ ಮಂಜುನಾಥೇಶ್ವರ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಸೇನಾನಿಗಳ ಪ್ರೇರಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಚ್ಚತಾ ಸೇನಾನಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು, ತ್ಯಾಜ್ಯಗಳನ್ನು ಬಳಕೆಯ ವಸ್ತುಗಳಾಗಿ ಪರಿವರ್ತಿಸಿ ಪರ್ಯಾಯ ಉದ್ಯೋಗವಾಗಿಯೂ ರೂಪುಗೊಳಿಸಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಕುಸುಮಾಕರ್ ಪ್ರಕೃತಿದತ್ತವಾಗಿರುವ ಸಂಪನ್ಮೂಲಗಳನ್ನು ವಿಷಯುಕ್ತವಾಗಿ ಮಾಡಿ ಮಾನವ ತನ್ನ ಕಾಲಿಗೆ ತಾನೇ ಕೊಡಲಿಯೇಟು ಹಾಕಿಕೊಂಡಿದ್ದಾನೆ. ಪ್ರಕೃತಿಯ ಹೋರಾಟದ ಪ್ರತಿಫಲದ ಕೂಸು ಕೊರೊನಾ. ಅದನ್ನು ಮಟ್ಟ ಹಾಕಲು ಸ್ವಚ್ಚತೆ ಅತ್ಯಗತ್ಯ ಎಂದರು.

ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಮಾತನಾಡಿ ಸ್ವಚ್ಚತೆಯಷ್ಟು ಪವಿತ್ರ ಕೆಲಸ ಬೇರೊಂದಿಲ್ಲ, ಸ್ವಚ್ಚತೆಯೂ ಒಂದು ಪೂಜೆ. ಎಲ್ಲಿ ಸ್ವಚ್ಚತೆ ನೆಲೆಸಿರುತ್ತದೋ ಅಲ್ಲಿ ಸಾನಿಧ್ಯ ನೆಲೆಸಿರುತ್ತದೆ ಎಂದರು.

ಸ್ವಚ್ಚತಾ ಸೇನಾನಿಗಳ ಮೂಲಕ ತಾಲೂಕಿನ ವಿವಿಧ ಭಾಗಗಳ ತ್ಯಾಜ್ಯ ವಿಲೇವಾರಿ ಸಮಸ್ಯೆಗಳನ್ನು ಆಲಿಸಲಾಯಿತು ಮತ್ತು ಸಲಹೆಗಳನ್ನು ಪಡೆಯಲಾಯಿತು.

ವೇದಿಕೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಸಂಯೋಜಕಿ ಮಂಜುಳಾ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ನಿರ್ದೇಶಕ ವಿವೇಕ್ ವಿನ್ಸಂಟ್ ಪಾಯಸ್, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಶುದ್ದಗಂಗಾ ಘಟಕ ಯೋಜನಾಧಿಕಾರಿ ಲಕ್ಷ್ಮಣ್, ತಾಲೂಕು ಯೋಜನಾಧಿಕಾರಿ ಜಯಕರ್ ಶೆಟ್ಟಿ, ಯಶವಂತ್ ತಾಲೂಕಿನ ಸ್ವಚ್ಚತಾ ಸೇನಾನಿಗಳು ಉಪಸ್ಥಿತರಿದ್ದರು.

🖊️ ವರದಿ : ಸ್ವಸ್ತಿಕ್ ಕನ್ಯಾಡಿ