
ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಮೀಪ ಮೆಕ್ಕೆಜೋಳ ತೆನೆ ಬಿಡಿಸುವ ಯಂತ್ರಕ್ಕೆ ವೇಲ್ ಸಿಲುಕಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ
ಶ್ರಾವಂಡನಹಳ್ಳಿ ಗ್ರಾಮದ ದೇವರಜ್ ನಾಯ್ಕ್ ಎಂಬುವವರ ಮಗಳು ರಮಾಬಾಯಿ (14) ಅಂಗಡಿಗೆ ತೆರಳುತ್ತಿದ್ದ ವೇಳೆ ಆಕೆಯ ದುಪ್ಪಟ್ಟ ಮೆಕ್ಕೆಜೋಳದ ಯಂತ್ರಕ್ಕೆ ಸಿಲುಕಿದೆ.
ಆಕಸ್ಮಿಕವಾಗಿ ದುಪ್ಪಟ್ಟ ಯಂತ್ರಕ್ಕೆ ಸಿಲುಕಿದ ಮರುಕ್ಷಣವೇ ಬಾಲಕಿ ರಮಾಬಾಯಿ ಯಂತ್ರದ ಬೆಲ್ಟ್ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.
ಕೂಡಲೇ ಸ್ಥಳೀಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗಮಧ್ಯೆಯೇ ಬಾಲಕಿ ರಮಾಬಾಯಿ ಕೊನೆಯುಸಿರೆಳೆದಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಮೆಕ್ಕೆಜೋಳದ ಯಂತ್ರದ ಮಾಲಿಕ ಹಂಪಸಂದ್ರ ಚಂದ್ರಪ್ಪ ಅವರ ಅಜಾಗರೂಕತೆಯೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ದೂರು ನೀಡಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪಿಎಸ್‌ಐ ಪಾಲಾಕ್ಷಪ್ರಭು ಹಾಗೂ ಎಎಸ್‌ಐ ಮೆಹಬೂಬ್ ಖಾನ್, ಮೃತ ಬಾಲಕಿಯ ಪೋಷಕರು ನೀಡಿರುವ ದೂರನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.