ಸ್ವಾಮಿ ವಿವೇಕಾನಂದರ ಜನನ, ಬಾಲ್ಯ ಹಾಗೂ ಶಿಕ್ಷಣ:
ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರನಾಥ. ಸ್ವಾಮಿ ವಿವೇಕಾನಂದರ ಜನ್ಮವು ದಿನಾಂಕ 12 ಜನವರಿ, 1863ರಲ್ಲಿ ಕೊಲ್ಕತ್ತಾದಲ್ಲಿ ಆಯಿತು. ಬಾಲ್ಯದಲ್ಲಿಯೇ ವಿವೇಕಾನಂದರ ವರ್ತನೆಯಲ್ಲಿ ಎರಡು ವಿಷಯಗಳು ಪ್ರಖರವಾಗಿ ಕಂಡು ಬರತೊಡಗಿತು. ಅವರು ಪ್ರವೃತ್ತಿಯಿಂದಲೇ ಶ್ರದ್ಧೆ ಮತ್ತು ದಯಾಮಯ ಹೃದಯವುಳ್ಳವರಾಗಿದ್ದರು. ಎರಡನೇ ವಿಷಯವೆಂದರೆ ಬಾಲ್ಯದಿಂದಲೇ ಅವರು ಯಾವುದೇ ಸಾಹಸಮಯವಾದ ಕಾರ್ಯವನ್ನು ಹಿಂಜರಿಯದೇ ಮಾಡುತ್ತಿದ್ದರು. ಸ್ವಾಮಿ ವಿವೇಕಾನಂದರ ಸಂಪೂರ್ಣ ಕುಟುಂಬವು ಆಧ್ಯಾತ್ಮ ಮಾರ್ಗದಲ್ಲಿದ್ದುದರಿಂದ ಬಾಲ್ಯದಿಂದಲೇ ಅವರ ಮೇಲೆ ಧರ್ಮದ ಕುರಿತು ಯೋಗ್ಯ ಸಂಸ್ಕಾರವಾಯಿತು. 1970 ರಲ್ಲಿ ಅವರನ್ನು ಈಶ್ವರಚಂದ್ರ ವಿದ್ಯಾಸಾಗರ ಇವರ ಶಾಲೆಗೆ ಸೇರಿಸಲಾಯಿತು. ಶಾಲೆಯಲ್ಲಿರುವಾಗಲೇ ಅಧ್ಯಯನದೊಂದಿಗೆ ಬಲೋಪಾಸನೆಯನ್ನು ಮಾಡಿದರು.
ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಭೇಟಿ !
ಧರ್ಮಭಾವನೆಯಿಂದ ಪ್ರೇರಿತರಾದ ನರೇಂದ್ರನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೇ ತೀವ್ರ ವೈರಾಗ್ಯ ಉತ್ಪನ್ನವಾಗಿರುವುದನ್ನು ಕಂಡು ಡಾ. ದತ್ತ ಇವರು ಒಮ್ಮೆ ನರೇಂದ್ರನಿಗೆ ‘ನಿನ್ನ ಜೀವನದ ಉದ್ದೇಶವು ಧರ್ಮಕಾರ್ಯವೇ ಆಗಿದ್ದರೆ, ನೀನು ನೇರವಾಗಿ ದಕ್ಷಿಣೇಶ್ವರದಲ್ಲಿರುವ ಶ್ರೀ ರಾಮಕೃಷ್ಣ ಪರಮಹಂಸರನ್ನು ಭೇಟಿಯಾಗು, ಹೋಗು’ ಎಂದು ಹೇಳಿದರು. ಒಂದು ದಿನ ಅವರಿಗೆ ಅವರ ಪಕ್ಕದ ಮನೆಯವರಾದ ಶ್ರೀ ಸುರೇಂದ್ರನಾಥ ಇವರಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ದರ್ಶನವಾಯಿತು. ಪ್ರಾರಂಭದ ಕೆಲವು ದಿನಗಳು ಶ್ರೀ ರಾಮಕೃಷ್ಣರು ನರೇಂದ್ರನನ್ನು ತಮ್ಮಿಂದ ಒಂದು ಕ್ಷಣವೂ ದೂರವಿಡಲು ಇಚ್ಛಿಸುತ್ತಿರಲಿಲ್ಲ. ನರೇಂದ್ರನನ್ನು ತಮ್ಮ ಹತ್ತಿರ ಕುಳ್ಳಿರಿಸಿಕೊಂಡು ಅನೇಕ ಉಪದೇಶಗಳನ್ನು ಮಾಡುತ್ತಿದ್ದರು. ಅವರಿಬ್ಬರೇ ಇರುವಾಗ ಅವರಲ್ಲಿ ಬಹಳ ಚರ್ಚೆಯಾಗುತ್ತಿತ್ತು. ಶ್ರೀ ರಾಮಕೃಷ್ಣರು ಅಪೂರ್ಣವಾಗಿ ಉಳಿದಿರುವ ತಮ್ಮ ಕಾರ್ಯವನ್ನು ನರೇಂದ್ರನಿಗೆ ವಹಿಸಿಕೊಡುವ ಯೋಚನೆಯಲ್ಲಿದ್ದರು. ಒಂದು ದಿನ ಶ್ರೀ ರಾಮಕೃಷ್ಣರು ಒಂದು ಕಾಗದದ ತುಂಡಿನ ಮೇಲೆ ‘ನರೇಂದ್ರನು ಲೋಕಶಿಕ್ಷಣದ ಕಾರ್ಯವನ್ನು ಮಾಡುವನು’ ಎಂದು ಬರೆದರು. ಅದನ್ನು ತಮಾಷೆಯಾಗಿ ತೆಗೆದುಕೊಂಡು ನರೇಂದ್ರನು ಅವರಿಗೆ ‘ಈ ಎಲ್ಲ ಕಾರ್ಯಗಳು ನನ್ನಿಂದ ಆಗುವುದಿಲ್ಲ’ ಎಂದಾಗ ಶ್ರೀ ರಾಮಕೃಷ್ಣರು ಕೂಡಲೇ ದೃಢವಾಗಿ ‘ಏನದು ಆಗುವುದಿಲ್ಲವೆಂದರೆ? ಅರೆ, ನಿನ್ನ ಎಲುಬುಗಳು ಕೂಡ ಈ ಕಾರ್ಯವನ್ನು ಮಾಡುವವು!’ ಎಂದರು. ಮುಂದೆ ಶ್ರೀ ರಾಮಕೃಷ್ಣ ಪರಮಹಂಸರು ನರೇಂದ್ರನಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಅವರ ನಾಮಕರಣವನ್ನು ‘ಸ್ವಾಮಿ ವಿವೇಕಾನಂದ’ ಎಂದು ಮಾಡಿದರು.
ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದ ಸಹಭಾಗಿತ್ವ
ಭಾರತವೆಂಬ ಸುವರ್ಣಭೂಮಿಯ ಸತ್ಪುರಷರಾದ ಶ್ರೇಷ್ಠತಮವಾದ ಸನಾತನ ಹಿಂದೂ ಧರ್ಮದ ಪರಿಚಯವನ್ನು ಜಗತ್ತಿಗೆ ಮಾಡಿಕೊಡುವುದು ಒಂದು ದೈವೀ ಯೋಗವೇ ಆಗಿತ್ತು. ಆಮೇರಿಕಾದ ಶಿಕಾಗೋದಲ್ಲಿ ದಿನಾಂಕ 11 ಸಪ್ಟೆಂಬರ 1863 ರಂದು ನಡೆದ ಸರ್ವಧರ್ಮ ಸಮ್ಮೇಳನದ ಮಾಧ್ಯಮದಿಂದ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಆಹ್ವಾನಿಸಿದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ನಿಜವಾದ ಪ್ರತಿನಿಧಿಯಾದರು. ಸೋಮವಾರ, ದಿನಾಂಕ 11 ಸಪ್ಟೆಂಬರ 1863 ರಂದು ಬೆಳಿಗ್ಗೆ ಧರ್ಮಗುರುಗಳ ಪ್ರಾರ್ಥನೆಯ ನಂತರ ಸಂಗೀತಮಯ ವಾತಾವರಣದಲ್ಲಿ ಸರ್ವಧರ್ಮ ಸಮ್ಮೇಳನದ ಶುಭಾರಂಭವಾಯಿತು.
‘ಅಮೇರಿಕಾದ ನನ್ನ ಸಹೋದರ ಸಹೋದರಿಯರೇ’ ಎಂದು ಸಭೆಯಲ್ಲಿರುವವರನ್ನು ಸಂಬೋಧಿಸಿ ತಮ್ಮ ಭಾಷಣವನ್ನು ಪ್ರಾರಂಭಿಸಿದ ಅವರ ಚೈತನ್ಯಪೂರ್ಣ ಮತ್ತು ತೇಜಸ್ವಿ ವಾಣಿಯಿಂದ ಎಲ್ಲರೂ ಮಂತ್ರಮುಗ್ಧರಾದರು. ಆ ಶಬ್ದಗಳು ಎಂತಹ ಅದ್ಭುತ ಶಕ್ತಿಯಿಂದ ತುಂಬಿದ್ದವು ಎಂದರೆ, ಸ್ವಾಮಿ ವಿವೇಕಾನಂದರ ಆ ಶಬ್ದಗಳನ್ನು ಉಚ್ಚರಿಸುತ್ತಲೇ ಸಾವಿರಾರು ಸ್ತ್ರೀ ಪುರುಷರು ತಮ್ಮ ಸ್ಥಳದಿಂದ ಎದ್ದು ನಿಂತರು ಮತ್ತು ಅವರು ಚಪ್ಪಾಳೆಯ ಪ್ರಚಂಡ ಸುರಿಮಳೆಯನ್ನು ಮಾಡಿದರು. ಜನರ ಹರ್ಷದಿಂದ ತುಂಬಿದ ಧ್ವನಿ ಮತ್ತು ಕರತಾಡನ ನಿರಂತರವಾಗಿತ್ತು. ಸ್ವಾಮಿ ವಿವೇಕಾನಂದರ ಆ ಭಾವಪೂರ್ಣ ಶಬ್ದಗಳಲ್ಲಿರುವ ಸತ್ವದಿಂದ ಎಲ್ಲ ಶ್ರೋತ್ರುಗಳ ಹೃದಯವು ಸ್ಪಂದಿಸಿತು. ಉಪಸ್ಥಿತ ವಕ್ತಾರರಲ್ಲಿ ‘ಸಹೋದರ ಸಹೋದರರಿಯರೇ’ ಎಂಬ ಶಬ್ದಗಳಿಂದ ಸಕಲ ಮಾನವ ಜಾತಿಯನ್ನು ಆಹ್ವಾನಿಸುವ ಸ್ವಾಮಿ ವಿವೇಕಾನಂದರು ಅದ್ವಿತೀಯರಾಗಿದ್ದರು.
‘ಹಿಂದೂ ಸಮಾಜವು ಬಡವಾಗಿರಬಹುದು; ಆದರೆ ಅದು ಘೃಣಾಸ್ಪದವಲ್ಲ. ಅದು ದೀನವಾಗಿರಬಹುದು, ದು:ಖಿತವಾಗಿರಬಹುದು, ಆದರೆ ಅತ್ಯಮೂಲ್ಯವಾದಂತಹ ಪಾರಮಾರ್ಥಿಕ ಸಂಪತ್ತಿನ ಉತ್ತರಾಧಿಕಾರಿಯಾಗಿದೆ. ಧರ್ಮದ ಕ್ಷೇತ್ರದಲ್ಲಿ ಅದು ಜಗದ್ಗುರುವಾಗಬಲ್ಲದು, ಇದು ಹಿಂದೂ ಧರ್ಮದ ಯೋಗ್ಯತೆಯಾಗಿದೆ’ ಈ ಶಬ್ದಗಳಿಂದ ಹಿಂದೂ ಧರ್ಮದ ಮಹತ್ವವನ್ನು ಬಣ್ಣಿಸಿದರು.
ಅನೇಕ ಶತಕಗಳ ನಂತರ ಸ್ವಾಮಿ ವಿವೇಕಾನಂದರು ಹಿಂದೂ ಸಮಾಜಕ್ಕೆ ಅದರ ಸೀಮೆಯು ಎಷ್ಟು ವಿಸ್ತೃತವಾಗಿದೆಯೆನ್ನುವುದನ್ನು ತೋರಿಸಿಕೊಟ್ಟರು. ಸ್ವಾಮಿ ವಿವೇಕಾನಂದರು ಯಾವುದೇ ಧರ್ಮದ ನಿಂದನೆ ಅಥವಾ ಟೀಕೆಯನ್ನು ಮಾಡಲಿಲ್ಲ. ಯಾವುದೇ ಧರ್ಮವನ್ನು ಅವರು ಕ್ಷುದ್ರವೆನ್ನಲಿಲ್ಲ. ಹಿಂದೂ ಧರ್ಮದ ಕುರಿತು ವಿದೇಶಿಯರ ತುಚ್ಚ ನಡುವಳಿಕೆ ಮತ್ತು ಅಪಮಾನಗಳೆಂಬ ಕೆಸರನ್ನು ಮೆತ್ತಿಕೊಂಡಿದ್ದ ಹಿಂದೂ ಧರ್ಮವನ್ನು ಸ್ವಾಮಿ ವಿವೇಕಾನಂದರು ಕೆಸರಿನಿಂದ ಪ್ರತ್ಯೇಕಿಸಿ, ಜಗತ್ತಿಗೆ ಅದರ ಮೂಲ ತೇಜಸ್ವಿ ಸ್ವರೂಪವನ್ನು ಪರಿಚಯಿಸಿದರು.
🖊️.ಶ್ರೀ. ಮೋಹನ ಗೌಡರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕಸಂಪರ್ಕ : 7204082609