ಬೆಂಗಳೂರು: ತುರಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಸುಮಾರು ನಾಲ್ಕು ಎಕರೆ ಬೆಂಕಿಗೆ ಆಹುತಿಯಾಗಿದೆ.
ಬನಶಂಕರಿ 6ನೇ ಹಂತಕ್ಕೆ ಹೊಂದಿಕೊಂಡಿರುವ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಪ್ರದೇಶದಲ್ಲಿ ಹುಲ್ಲು ಮತ್ತು ಕುರುಚಲ ಗಿಡಗಳಿಂದ ಮಾತ್ರ ಕೂಡಿತ್ತು. ಯಾವುದೇ ದೊಟ್ಟ ಮತ್ತು ಹಳೆಯ ಮರಗಳು ಇರಲಿಲ್ಲ. ಅಲ್ಲದೆ, ನೆಲ ಮಟ್ಟದ ಬೆಂಕಿಯಾಗಿದ್ದು, ಯಾವ ರೀತಿಯಿಂದಲೂ ದೊಡ್ಡ ಮಟ್ಟದ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆ 6.45ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಸಿಬ್ಬಂದಿ ಸ್ಥಳಕ್ಕೆ ತೆರಳಿ, ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು.
ಏಳು ಗಂಟೆ ಸತತ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಬೇಸಿಗೆ ಸಮೀಪಿಸಿರುವುದರಿಂದ ಅರಣ್ಯ ಪ್ರದೇಶದ ಲ್ಲಿ ಹುಲ್ಲು ಒಣಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳಿವೆ. ಘಟನೆಯಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ” ಎಂದು ಕಗ್ಗಲೀಪುರ ಅರಣ್ಯ ವಲಯಾಧಿಕಾರಿ ಗೋಪಾಲ್ ತಿಳಿಸಿದ್ದಾರೆ.