ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಎಂ.ವಾಸುದೇವರವರ ವರ್ಗಾವಣೆಯನ್ನು ರದ್ದುಪಡಿಸುವಂತೆ ಕಾಲೇಜಿನ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಉಪನ್ಯಾಸಕ ಕೆ.ಎಂ.ವಾಸುದೇವ ಮೇಲೆ ಸಾಕ್ಷಾಧಾರವಿಲ್ಲದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರ್ನಾಡ ಮುಡಿಪು ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆ ಮಾಡಲಾಗಿದೆ. ವಿಷಯ ತಿಳಿದ ಹಳೆಯ ವಿದ್ಯಾರ್ಥಿಗಳು ಮತ್ತು ಹಾಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಾಥಮಿಕ ಮತ್ತುಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ.
ವರ್ಗಾವಣೆಯ ವಿಚಾರದಲ್ಲಿ ವಿದ್ಯಾರ್ಥಿಗಳು, ಸ್ಥಳೀಯರು, ಹಳೆಯ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಗಣನೆಗೆ ತೆಗದುಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ. ಕೆ.ಎಂ.ವಾಸುದೇವ ಅವರು ಶೀಳನೆರೆಯ ಕಾಲೇಜಿಗೆ ಬಂದ ನಂತರ ಕಾಲೇಜು ಹಾಗೂ ವಿದ್ಯಾರ್ಥಿಗಳ ಸಾಮರ್ಥ್ಯಾಭಿವೃದ್ದಿಗಾಗಿ ಬಹಳಷ್ಟು ಶ್ರಮಿಸಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೆ.ಎಂ.ವಾಸುದೇವ ಅವರು ಈ ಕಾಲೇಜಿನ ಉಪನ್ಯಾಸಕರಾದಾಗಿನಿಂದ ಇಲ್ಲಿಯವರೆಗೂ ಪ್ರತಿ ಶೈಕ್ಷಣಿಕ ವರ್ಷದಲ್ಲಿಯು ಫಲಿತಾಂಶ ಉತ್ತಮ ರೀತಿಯಲ್ಲಿದೆ. ಅಲ್ಲದೆ, ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದಲ್ಲಿ, ವಿಶೇಷವಾಗಿ ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳ ಕಲಿಕೆ ಬಹಳಷ್ಟು ಸುಧಾರಿಸಿದೆ. ಸಮಯವನ್ನು ಲೆಕ್ಕಿಸದೆ ವಿದ್ಯಾರ್ಥಿಗಳಿಗೆ ಭೋಧನೆಯನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಬಿಡುವಿನ ಸಮಯವನ್ನೂ ಕೂಡ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗಾಗಿ ಮೀಸಲಿಟ್ಟು, ದುಡಿದಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಕೆ.ಆರ್.ಪೇಟೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ (ಶತಮಾನದ ಶಾಲೆ)ಯನ್ನು ಅಭಿವೃದ್ಧಿಗೊಳಿಸಲು ಕೆ.ಎಂ.ವಾಸುದೇವ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ, ಅದೇ ಶಾಲೆಗೆ ತಮ್ಮ ಮಗನಾದ ಬುದ್ದದಾಸ್ ಅವರನ್ನು ಸೇರಿಸಿದ್ದು, ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದಾರೆ. ಶೀಳನೆರೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮನೆ ( ಎಲ್.ಕೆ.ಜಿ. & ಯು.ಕೆ.ಜಿ) ತರಗತಿಗಳನ್ನ ತೆರೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.
ಅವರ ಸೇವೆಯನ್ನು ಸಹಿಸದ ಕೆಲವು ತಿಳಿಗೇಡಿ-ಭ್ರಷ್ಟ ವ್ಯಕ್ತಿಗಳು ವಾಸುದೇವ ಅವರ ವಿರುದ್ಧ ಪದೇ-ಪದೇ ಮೂಗರ್ಜಿಗಳನ್ನು ಬರೆದಿದ್ದಾರೆ. ಯಾರೋ ಒಬ್ಬರು ದುರುದ್ದೇಶಗಳಿಂದ ಬರೆದ ಅರ್ಜಿಗೆ ಸಂಬಂಧಿಸಿದಂತೆ ಕಾಲೇಜಿನಿಂದಾಗಲಿ, ವಿದ್ಯಾರ್ಥಿಗಳಿಂದಾಗಲಿ ಅಥವಾ ಗ್ರಾಮಸ್ಥರಿಂದಾಗಲಿ ಮಾಹಿತಿಗಳನ್ನು ಪಡೆಯದೆ, ಸಮರ್ಪಕ ವಿಚಾರಣೆ ನಡೆಸದೆ ಕ್ರಮ ವಹಿಸಿರುವುದು ನಮಗೆಲ್ಲ ನೋವುಂಟುಮಾಡಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.