ಮಂಗಳೂರು: ಕೊರಗಜ್ಜನ ಕಟ್ಟೆಗಳು, ದೇವಸ್ಥಾನಗಳು, ದೈವಸ್ಥಾನಗಳು, ನಾಗನ ಕಟ್ಟೆಗಳು, ದರ್ಗಾ ಸಹಿತ 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ ಪ್ರಕರಣಗಳನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ ಉಣ್ಕಲ್ ಮೂಲದ, ಮಂಗಳೂರಿನ ಕೋಟೆಕಾರು ಕೊಂಡಾಣ ನಿವಾಸಿ ದೇವದಾಸ್ ದೇಸಾಯಿ(62) ಬಂಧಿತ ಆರೋಪಿ. ಸೋಮವಾರ ರಾತ್ರಿ ಅತ್ತಾವರ ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆಯಲ್ಲಿ ಕಾಂಡಂ ಇರಿಸಿ ಅಪಚಾರ ಎಸಗಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಇಷ್ಟು ಪ್ರಕರಣಗಳ ಸುಳಿವು ಲಭಿಸಿತ್ತು.
ಆರೋಪಿ ಕ್ರಿಶ್ಚಿಯನ್ ಧರ್ಮದವನಾಗಿದ್ದು, “ಭೂಮಿ ಅಂತ್ಯವಾಗುವ ಸಮಯ ಬಂದಿದೆ. ದೇವರು ನಮ್ಮನ್ನು ರಕ್ಷಿಸಬೇಕಾದರೆ, ಆತನೇ ಶ್ರೇಷ್ಠ ಎಂದು ಸಾರಬೇಕಾಗಿದ್ದು, ಅದಕ್ಕಾಗಿ ಈ ಕೃತ್ಯ ಎಸಗಿದ್ದೇನೆ. ಇದಕ್ಕೆ ಪಶ್ಚಾತಾಪ ಇಲ್ಲ” ಎಂದು ತಿಳಿಸಿದ್ದಾನೆ.
ಆರೋಪಿ ದೇವದಾಸ್‌ನ ತಂದೆ ಜಾನ್ ದೇಸಾಯಿ ಹಿಂದು ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಈತ ಕೂಡ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದು, ಮಂಗಳೂರಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾನೆ. ಧಾರ್ಮಿಕ ಕೇಂದ್ರಗಳ ಸಮೀಪ ಕಾಂಡಂ, ಕ್ರೈಸ್ತ ಧರ್ಮದ ಭಿತ್ತಿಪತ್ರಗಳನ್ನು ಹಾಕುತ್ತಿದ್ದುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ.
ಪಾಂಡೇಶ್ವರ ಠಾಣೆ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಆತ ಮಾನಸಿಕ ಅಸ್ವಸ್ಥತನಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.