ಗಗನಯಾನಕ್ಕೂ ಮುನ್ನ ತುಳು ಭಾಷೆಯಲ್ಲಿ ಮಾತೆರೆಗ್ಲಾ ಸೊಲ್ಮೆಲು ಎಂದು ಸ್ವಾಗತಿಸಿದ ಪೈಲಟ್!

READ ALSO

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬ ಆಗ್ರಹದ ನಡುವೆಯೇ ಇಲ್ಲೊಬ್ಬ ವಿಮಾನದ ಪೈಲಟ್ ತುಳುವಿನಲ್ಲಿ ಅನೌನ್ಸ್ ಮೆಂಟ್ ಕೊಟ್ಟು ಹೈಫೈ ಇಂಗ್ಲಿಷ್ ಪ್ರಿಯರ ಮಧ್ಯೆ ವಿಭಿನ್ನ ಆಕರ್ಷಣೆಗೆ ಕಾರಣವಾಗಿದ್ದಾರೆ.

ಉಡುಪಿ ಜಿಲ್ಲೆಯ ಮೂಲದ ಪ್ರದೀಪ್ ಪದ್ಮಶಾಲಿ ಇಂಡಿಗೋ ವಿಮಾನದಲ್ಲಿ ಪೈಲಟ್ ಆಗಿದ್ದು ಶುಕ್ರವಾರ ರಾತ್ರಿ ಎಂಟು ಗಂಟೆಗೆ ಮುಂಬೈನಿಂದ ಮಂಗಳೂರಿಗೆ ವಿಮಾನ ಹೊರಡುವಾಗ ಇಂಗ್ಲಿಷ್ ಬದಲಿಗೆ ತುಳುವಿನಲ್ಲಿ ಅನೌನ್ಸ್ ಮೆಂಟ್ ಕೊಟ್ಟಿದ್ದಾರೆ. ದೇಶೀಯ ವಿಮಾನದಲ್ಲಿ ‌ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ವಿಮಾನ ಹೊರಡುವಾಗ ಮತ್ತು ಇಳಿಯುವಾಗ ಪ್ರಯಾಣಿಕರಿಗೆ ಸೂಚನೆ ರವಾನಿಸುವ ಪದ್ಧತಿ ಇದೆ. ಆದರೆ, ಕರಾವಳಿ ಕರ್ನಾಟಕದ ಜನರ ಸ್ಥಳೀಯ ಭಾಷೆ ಎನ್ನುವ ನೆಲೆಯಲ್ಲಿ ಮುಂಬೈನಿಂದ ಮಂಗಳೂರಿಗೆ ಬರುವ ವಿಮಾನದಲ್ಲಿ ಕರಾವಳಿ ಜನರೇ ಹೆಚ್ಚಿರುವುದರಿಂದ ಪೈಲಟ್ ಈ ಬಗ್ಗೆ ಹಿರಿಯಧಿಕಾರಿಗಳ ಅನುಮತಿ ಪಡೆದು ತುಳು ಭಾಷೆಯಲ್ಲಿ ಸೂಚನೆ ನೀಡಿದ್ದಾರೆ. ‌

ಇಂಡಿಗೋ ವಿಮಾನ ಪ್ರತಿ ದಿನವೂ ಎಂಟು ಗಂಟೆಗೆ ಮುಂಬೈನಿಂದ ಹೊರಟು ರಾತ್ರಿ 9.30ಕ್ಕೆ ಮಂಗಳೂರು ತಲುಪುತ್ತದೆ. ಇದರಲ್ಲಿ ಪ್ರದೀಪ್ ಪೈಲಟ್ ಆಗಿದ್ದು ತಾನೊಬ್ಬ ತುಳುವ ಅನ್ನುವ ಅಭಿಮಾನದಿಂದ ಇಂಗ್ಲಿಷ್ ಭಾಷೆಯಲ್ಲಿರುವ ಸೂಚನೆಯನ್ನು ತುಳುವಿನಲ್ಲಿ ಬರೆದು ಓದಿದ್ದಾರೆ.

ಪ್ರದೀಪ್ ಉಡುಪಿ ಮೂಲದ ಕುಟುಂಬದವರಾಗಿದ್ದು ಮುಂಬೈನಲ್ಲಿಯೇ ಬೆಳೆದು ಕಲಿತು ಪೈಲಟ್ ಉದ್ಯೋಗಕ್ಕೆ ಸೇರಿದ್ದಾರೆ. ಮಾತೆರೆಗ್ಲಾ ಸೊಲ್ಮೆಲು ಎನ್ನುತ್ತಾ ತುಳುವಿನಲ್ಲಿ ಅನೌನ್ಸ್ ಮೆಂಟ್ ಕೊಟ್ಟಿರುವ 45 ನಿಮಿಷಗಳ ವಿಡಿಯೋ ಕರಾವಳಿಯಲ್ಲಿ ವೈರಲ್ ಆಗಿದೆ. ಹೆಚ್ಚಿನವರು ತಮ್ಮ ವಾಟ್ಸಪ್ ಸ್ಟೇಟಸ್ ಹಾಕಿ ಅಭಿಮಾನ ಮೆರೆದಿದ್ದಾರೆ.