ಇನ್ಮುಂದೆ ವಾರದಲ್ಲಿ 4 ದಿನ ಮಾತ್ರ ಕೆಲಸ – ಶೀಘ್ರವೇ ಹೊಸ ಕಾರ್ಮಿಕ ಸಂಹಿತೆ

ನವದೆಹಲಿ: ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಔದ್ಯೋಗಿಕ ಸುರಕ್ಷತೆ ದೃಷ್ಟಿಯಿಂದ ಮುಂದಿನ ಹಣಕಾಸು ವರ್ಷದಿಂದ ಭಾರತವು 4 ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಹೊಸ ಸಂಹಿತೆ ಅಡಿಯಲ್ಲಿ ಉದ್ಯೋಗ, ಕೆಲಸದ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಅಂಶಗಳು ಬದಲಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ವಾರದಲ್ಲಿ 5 ದಿನಗಳ ಕೆಲಸ ಇರುತ್ತದೆ. ಆದರೆ ಹೊಸ ಸಂಹಿತೆಯಲ್ಲಿ ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲು ಅವಕಾಶ ಇರಲಿದೆ. ಆದರೆ 48 ಗಂಟೆಗಳ ಸಾಪ್ತಾಹಿಕ ಕೆಲಸದ ಅವಶ್ಯಕತೆಯನ್ನು ಪೂರೈಸಬೇಕಾಗಿರುವುದರಿಂದ, ನಾಲ್ಕು ದಿನಗಳಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಕಾರ್ಮಿಕ ಇಲಾಖೆ ಸ್ಪಷ್ಟಪಡಿಸಿದೆ.

READ ALSO

ಕೈಗೆ ಕಡಿಮೆ ಸಂಬಳ, ಪಿಎಫ್ ಹೆಚ್ಚಳ
ಹೊಸ ಸಂಹಿತೆಗಳು ಜಾರಿಗೆ ಬಂದರೆ, ನೌಕರರ ಕೈಗೆ ಸಿಗುವ ಸಂಬಳದ ಮೊತ್ತ ಕಡಿಮೆಯಾಗಲಿದ್ದು, ಭವಿಷ್ಯನಿಧಿ ಖಾತೆಗೆ (ಪಿಎಫ್) ಜಮಾ ಆಗುವ ಮೊತ್ತ ಹೆಚ್ಚಳವಾಗಲಿದೆ. ಎಲ್ಲ ಬಗೆಯ ಭತ್ಯೆಗಳು ನೌಕರರ ಒಟ್ಟು ವೇತನದ ಶೇಕಡ 50ರಷ್ಟನ್ನು ಮೀರುವಂತಿಲ್ಲ. ಅಂದರೆ ಒಟ್ಟು ಸಂಬಳದಲ್ಲಿ ಶೇಕಡ 50ರಷ್ಟು ಭಾಗವು ಮೂಲ ವೇತನ ಆಗಿರಬೇಕು. ಪಿಎಫ್ ಖಾತೆಗೆ ವರ್ಗಾವಣೆ ಆಗುವ ಮೊತ್ತವನ್ನು ನೌಕರರ ಮೂಲವೇತನದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.

ಉದ್ಯೋಗಿಯ ವೇತನ ತಿಂಗಳಿಗೆ 50,000 ರೂ. ಆಗಿದ್ದರೆ, ಅವರ ಮೂಲ ವೇತನ 25,000 ರೂ. ಆಗಬಹುದು. ಉಳಿದ 25,000 ರೂ. ಭತ್ಯೆಗಳಿಗೆ ಪರಿಗಣಿಸಲಾಗುವುದು.

ಕೇಂದ್ರ ಸರ್ಕಾರವು ಈಗಾಗಲೇ ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಿದೆ. ಈಗ ಏನಿದ್ದರೂ ರಾಜ್ಯಗಳು ತಮ್ಮ ಭಾಗದಲ್ಲಿ ನಿಯಮಗಳನ್ನು ರೂಪಿಸಬೇಕಾಗಿದೆ. 2021ರ ಫೆಬ್ರವರಿಯಲ್ಲಿ ಈ ಸಂಹಿತೆಗಳಿಗೆ ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ಪೂರ್ಣಗೊಳಿಸಿದೆ. ಇವುಗಳಿಗೆ ಸಂಬಂಧಿಸಿದ ಬಹುತೇಕ ರಾಜ್ಯ ಸರ್ಕಾರಗಳು ಅಧಿಸೂಚನೆಯಲ್ಲಿ ಪ್ರಕಟಿಸಿವೆ. ಹೀಗಾಗಿ 2022-23ನೇ ಹಣಕಾಸು ವರ್ಷದಲ್ಲಿ ಕಾಯ್ದೆಗಳು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ದೇಶದ 13 ರಾಜ್ಯಗಳು ಕರಡು ನಿಯಮಗಳನ್ನು ಮೊದಲೇ ಪ್ರಕಟಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.