ಬೆಳ್ತಂಗಡಿ: ಬೆಳ್ತಂಗಡಿಯ ಉಜಿರೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ SDPI ಕಾರ್ಯಕರ್ತರು ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿಚಾರವು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ವಿಚಾರಕ್ಕಾಗಿ ಇಂದು ಸಂಜೆ ಉಜಿರೆ ಪೇಟೆಯಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಸೇರಿ ಬೃಹತ್ ಪ್ರತಿಭಟನೆ ನಡೆಸಿದೆ.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ವಿ. ಹಿಂಪ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡುತ್ತಾ
ಉಳಿಯಲು ಜಾಗ ಕೊಟ್ಟ,ಕುಡಿಯಲು ನೀರು, ಬದುಕಲು ಜಾಗ ಉದ್ಯೋಗ ಎಲ್ಲವನ್ನೂ ಕೊಟ್ಟ ನಮ್ಮ ಹೆಮ್ಮೆಯ ದೇಶ ಭಾರತ. ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನದ ಪರ ಘೋಷಣೆ ಹಾಕಿದ ಆ ಮನುಷ್ಯನ ಹುಟ್ಟಡಗಿಸುವಂತೆ ಹೊಡಿಯಲೇಬೇಕು. ಪಕ್ಷ ಯಾವುದೇ ಇರಲಿ, ರಾಷ್ಟ್ರವಿರೋಧಿ ದೇಶವಾದ ಪಾಕಿಸ್ತಾನದ ಪರ ಘೋಷಣೆ ಹೇಳಿದರೆ ಅಂತಹವನನ್ನು ಅಟ್ಟಾಡಿಸಿಕೊಂಡು ಹೊಡೆಯಬೇಕು.
‘ಸರ್ವೇ ಜನಃ ಸುಖಿನೋ ಭವಂತು’ ಎಂದು ನಮ್ಮ ದೇಶದಲ್ಲಿ ಎಲ್ಲಾ ರೀತಿಯ ಜನರಿಗೂ ಬದುಕಲು ನೀಡಿದ ಈ ಜಗದಲ್ಲಿ ನಿಂತು ಪಾಕಿಸ್ತಾನದ ಪರ ಘೋಷಣೆ ಕೂಗಿದ ಇಂತಹವರನ್ನು ಸಹಿಸಿಕೊಂಡಿರಲು ಅಸಾಧ್ಯ ಈ ಕಾರಣದಿಂದ sdpi ಹಾಗೂ pfi ಪಕ್ಷಗಳನ್ನು ಬ್ಯಾನ್ ಮಾಡಬೇಕು ಹಾಗೂ ಮೊನ್ನೆ ಚುನಾವಣೆಯಲ್ಲಿ ಗೆದ್ದವರನ್ನು ಚುನಾವಣಾ ಆಯೋಗ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ದೇಶದ್ರೋಹಿ ಘೋಷಣೆ ಕೂಗಿದ ಅಪರಾಧಿಗಳನ್ನು ಸೆರೆಹಿಡಿದು ಜೈಲಿಗಟ್ಟಿದ ಪೊಲೀಸರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಈ ಘೋಷಣೆಯ ಕೂಗಿದವರ ಹಿಂದೆ ಯಾರದೇ ಕೈವಾಡ ಇದ್ದರೂ ಅವರನ್ನೂ ಪತ್ತೆ ಹಚ್ಚಿ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಜಾಮೀನಿಗೆಂದು ಪ್ರತಿ ದಿನವೂ ಠಾಣೆಯ ಎದುರುಗಡೆ ಬರುತ್ತಿದ್ದಾರೆ. ಆದರೆ ಅವರ ಒತ್ತಡಕ್ಕೆ ಮಣಿದು, ಅವರನ್ನು ಬಿಡುಗಡೆಗೊಳಿಸಿದ್ದೆ ಆದರೆ ವಿಶ್ವ ಹಿಂದೂ ಪರಿಷತ್ ನ ಎಲ್ಲಾ ಸದಸ್ಯರೂ ಒಗ್ಗಟ್ಟಾಗಿ ಕರಾವಳಿಯ ಎಲ್ಲಾ ಜಿಲ್ಲೆಗಳ ರಸ್ತೆ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ” ಎಂದು ಗುಡುಗಿದರು.
ಭಜರಂಗದಳದ ಪುತ್ತೂರು ಜಿಲ್ಲಾ ಕಾರ್ಯಧ್ಯಕ್ಷರಾದ ಭಾಸ್ಕರ ಧರ್ಮಸ್ಥಳ, ವಿ. ಹಿಂಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಅಗರ್ತ, ಉಪಸ್ಥಿತರಿದ್ದರು.