ಬೆಳಗಾವಿ: ಬಸ್‌ಗಳಲ್ಲಿ ಟಿಕೆಟ್ ಖರೀದಿಸಲು ಯುಪಿಐ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಪ್ರಾಯೋಗಿಕ ಜಾರಿ ಬಗ್ಗೆ ಮಾಹಿತಿ ಹಂಚಿಕೊಂಡ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ವ್ಯವಸ್ಥೆ ಯಶಸ್ವಿಯಾದರೆ, ಉಳಿದ ನಿಗಮಗಳಿಗೂ ಡಿಜಿಟಲ್ ಪಾವತಿ ವ್ಯವಸ್ಥೆ ಅನುಷ್ಠಾನ ಮಾಡಲಾಗುವುದು. ಸಾರಿಗೆ ಇಲಾಖೆಯು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC)ಬಸ್‌ಗಳಲ್ಲಿ ಟಿಕೆಟ್ ಖರೀದಿಸಲು ಯುಪಿಐ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿ ಮಾಡಿದೆ.
ನಮ್ಮ ಸಂಕಲ್ಪ ಜನಸ್ನೇಹಿ ಮತ್ತು ಜನಪರ ಆಡಳಿತ.
— Ramalinga Reddy (@RLR_BTM) September 2, 2023
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ ಟಿಕೆಟ್‌ಗಳಿಗೆ ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸಲು ಪ್ರಾಯೋಗಿಕ ಆಧಾರದ ಮೇಲೆ UPI ಆಧಾರಿತ ಪಾವತಿಗಳನ್ನು ಪ್ರಾರಂಭಿಸಿದೆ.#NWKRTC #Karnataka #RamalingaReddy pic.twitter.com/gSycF5BY2l
ಈ ಬಗ್ಗೆ ಟ್ವೀಟ್ ಮಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, “ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಟಿಕೆಟ್‌ಗಳಿಗೆ ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸಲು ಪ್ರಾಯೋಗಿಕ ಆಧಾರದ ಮೇಲೆ ಯುಪಿಐ ಆಧಾರಿತ ಪಾವತಿಗಳನ್ನು ಪ್ರಾರಂಭಿಸಿದೆ” ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬಸ್‌ಗಳಲ್ಲಿ ಮಾತ್ರ ಜಾರಿ ಮಾಡಲಾಗಿದ್ದು, ಒಂದು ವೇಳೆ ಇದು ಯಶಸ್ವಿಯಾದರೆ, ಉಳಿದ ನಿಗಮಗಳಿಗೂ ಡಿಜಿಟಲ್ ಪಾವತಿ ವ್ಯವಸ್ಥೆ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ಬಿಎಂಟಿಸಿಯಲ್ಲಿ ಈಗಾಗಲೇ ಈ ವ್ಯವಸ್ಥೆ ಚಾಲ್ತಿಯಲ್ಲಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಭರತ್ ಎಸ್, ಪ್ರಾಯೋಗಿಕವಾಗಿ 10 ಬಸ್‌ಗಳಲ್ಲಿ ಅಳವಡಿಸಿದ್ದೇವೆ. ಇದು ಯಶಸ್ವಿಯಾದರೆ ಎಲ್ಲಾ ಬಸ್‌ಗಳಲ್ಲಿ ಅಳವಡಿಸುವ ಚಿಂತನೆ ಮಾಡುತ್ತಿದ್ದೇವೆ. ಸದ್ಯಕ್ಕೆ ವಾಯವ್ಯ ಕರ್ನಾಟಕ ಬಸ್‌ಗಳಲ್ಲಿ ಟಿಕೆಟ್ ಖರೀದಿಸಲು ಯುಪಿಐ ಮೂಲಕ ಪ್ರಯಾಣಿಕರು ಹಣ ಪಾವತಿಸಬಹುದು. ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸಲು ಹಾಗೂ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ” ಎಂದು ತಿಳಿಸಿದರು.

ಆರಂಭದಲ್ಲಿ ಪ್ರಾಯೋಗಿಕವಾಗಿ ಹುಬ್ಬಳ್ಳಿ ಗ್ರಾಮಾಂತರ 3ನೇ ಡಿಪೋ ಬಸ್ಸುಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರ ಸಾಧಕ-ಬಾಧಕಗಳು ಹಾಗೂ ಸಾರ್ವಜನಿಕ ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಇತರೆ ಬಸ್ಸುಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ” ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಮುಖ್ಯಸ್ಥ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಯುಪಿಐ ಟಿಕೆಟ್ ಮಾದರಿ

ಬಸ್‌ಗಳಲ್ಲಿ ಚಿಲ್ಲರೆಗಾಗಿ ಹೊಡೆದಾಟ ನಡೆಯುವ ಸುದ್ದಿಗಳು ಕಿವಿಗೆ ಬೀಳುತ್ತಿರುವ ಮಧ್ಯೆಯೇ ಸಾರಿಗೆ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದ್ದು, ಯಶಸ್ವಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆ ಮೂಲಕ ಚಿಲ್ಲರೆ ಸಮಸ್ಯೆ ನೀಗಬಹುದು ಎಂದು ಅಂದಾಜಿಸಲಾಗಿದೆ.
‘ಬಸ್‌ನಲ್ಲೀ ಈ ಮೊದಲು ಗೂಗಲ್ ಪೇ, ಪೋನ್‌ಪೇ ಆಗುತ್ತಿರಲಿಲ್ಲ. ಚಿಲ್ಲರೆ ಸಮಸ್ಯೆ ತಪ್ಪುತ್ತದೆ. ಇದರಿಂದ ಬಹಳ ಅನುಕೂಲ ಆಗಿದೆ’ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.