ಚಿಕ್ಕಮಗಳೂರು: ರೀಸೈಕ್ಲಿಂಗ್ ಇಂಟೆರ್ನ್ಯಾಷನಲ್ ಯುರೋಪ್ ವಿಶ್ವದ 100 ಪ್ರಭಾವಿ ಜನರನ್ನು ಆಯ್ಕೆ ಮಾಡಿದ್ದು,ಇದರಲ್ಲಿ ಕೊಪ್ಪ ಮೂಲದ ವೆಂಕಟೇಶ್ ಮೂರ್ತಿಯವರು 28ನೇ ಸ್ಥಾನವನ್ನು ಪಡೆದು ಭಾರತಕ್ಕೆ ಗರಿಮೆಯನ್ನು ತಂದು ಕೊಟ್ಟಿದ್ದಾರೆ.
ವೆಂಕಟೇಶ್ ಮೂರ್ತಿಯವರು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಬೆಳವಾಡಿಯಲ್ಲಿ ಜನಿಸಿ ,ರೈತಾಪಿ ಕುಟುಂಬದಿಂದ ಬೆಳೆದು ,ತಮ್ಮ ಶ್ರಮ ಹಾಗೂ ಪರಿಶ್ರಮದಿಂದ ವಿಶ್ವದ ಉನ್ನತ ಮಟ್ಟವನ್ನು ತಲುಪಿದ್ದಾರೆ.
ಇವರು ತಮ್ಮ ವಿದ್ಯಾಭ್ಯಾಸವನ್ನು ಹಳ್ಳಿಯಿಂದಲೇ ಪ್ರಾರಂಭಿಸಿ , ಉನ್ನತ ಶಿಕ್ಷಣ ಎಂ.ಟೆಕ್ ಅನ್ನು ಸುರತ್ಕಲ್ಲಿನಲ್ಲಿ ಹಾಗೂ ಎಂಬಿಎ ಪದವಿಯನ್ನು ಸಿಂಗಾಪುರದಲ್ಲಿ ಮಾಡಿದ್ದಾರೆ. ಇವರಿಗೆ “ಈ-ತ್ಯಾಜ್ಯ”ಇಂಡಸ್ಟ್ರಿಯಲ್ಲಿ ಸರಿ ಸುಮಾರು 25 ವರ್ಷ ಅನುಭವಗಳಿದ್ದು ಹತ್ತು ಹಲವು ಸಾಧನೆಗಳನ್ನು ಮಾಡಿದ್ದಾರೆ.
ವ್ಯಾನ್ಸ್ ಕೆಮಿಸ್ಟ್ರಿ ಎಂಬ ಸಂಸ್ಥೆಯ ಸಂಸ್ಥಾಪಕರು ಹಾಗೂ ನಿರ್ದೇಶಕರಾಗಿರುವ ಇವರು, ಯುಎಸ್ಎ, ವಾಷಿಂಗ್ಟನ್ ಡಿಸಿ , ಸೆರಿಯ ವೈಸ್ ಛೇರ್ಮನ್ ಮತ್ತು ಬೋರ್ಡ್ ಆಫ್ ಡೈರಕ್ಟರ್ ಕೂಡ ಆಗಿದ್ದರೆ. ಸದ್ಯ “ಈ-ತ್ಯಾಜ್ಯ” ಸಂಸ್ಥೆಯ ಏಷ್ಯಾ ಖಂಡದ ರಾಯಭಾರಿಯಾಗಿದ್ದಾರೆ.
ಇವರು 2019ರ ಸಿಂಗಾಪುರದ “ಸಿಂಗಾರ” ಪುರಸ್ಕಾರ ಹಾಗು 2014ರ “ಅನಿವಾಸಿ ಭಾರತೀಯ ” ಪ್ರಶಸ್ತಿಗೆ ಭಾಜನರಾಗಿದ್ದು, 60ಕ್ಕೂ ಹೆಚ್ಚು ದೇಶಗಳನ್ನು ಪ್ರವಾಸ ಮಾಡಿ, ಹತ್ತಕ್ಕೂ ಹೆಚ್ಚು ಯೋಜನೆಗಳನ್ನು ಅಮೇರಿಕಾ, ಮಲೇಷಿಯಾ, ದಕ್ಷಿಣ ಆಫ್ರಿಕಾ , ಸಿಂಗಾಪುರ್ ಇತ್ಯಾದಿ ದೇಶಗಳ ಸಹಭಾಗಿತ್ವದೊಂದಿಗೆ ಜಾರಿಗೆ ತಂದಿದ್ದಾರೆ.
ಇ-ತ್ಯಾಜ್ಯದಲ್ಲಿ ತಮ್ಮದೇ ಆದ ಟೆಕ್ನೋಲೊಜಿ ಬಳಸಿ ಅದರಲ್ಲಿ ಬರುವ ಚಿನ್ನ , ತಾಮ್ರ ,ಅಲುಮಿನಿಯಂ, ಪ್ಲಾಟಿನಂ, ಪೇಲಾಡಿಯಂ ಹಾಗೂ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಮರುಬಳಕೆ ಮಾಡುವಂತೆ ಹಾಗೂ ಇದರಲ್ಲಿ ಬರುವ ವಿಷಕಾರಕ ಅಂಶಗಳನ್ನೂ ಸಂಸ್ಕರಿಸಿರುತ್ತಾರೆ.
ಭಾರತದಂತಹ ದೇಶಗಳಲ್ಲಿ ಇ-ತ್ಯಾಜ್ಯವನ್ನು ಅಸಂಪ್ರದಾಯ ಹಾಗು ಅವೈಜ್ಞಾನಿಕವಾಗಿ ಸಂಸ್ಕರಿಸುವುದರಿಂದ ಗಂಭೀರ ಆರೋಗ್ಯ ಮತ್ತು ಮಾಲಿನ ಸಮಸ್ಯೆಗಳು ಉಂಟಾಗುತ್ತದೆ. ವೆಂಕಟೇಶ್ ಮೂರ್ತಿಯವರ ಜ್ಞಾನ ಮತ್ತು ಅನುಭವದಿಂದ ಇದನ್ನು ತಡೆಯುವ ಯೋಜನೆಗಳಲ್ಲಿ ಇವರ ಸಂಸ್ಥೆಯು ಮುಂಚೂಣಿಯಲ್ಲಿದೆ.ವೆಂಕಟೇಶ ಮೂರ್ತಿಯವರ ಜೀವನ, ಸಾಧನೆ ಮತ್ತು ಚಿಂತನೆಗಳು ಎಲ್ಲಾ ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಸ್ಪೂರ್ತಿಯ ಮತ್ತು ಹೆಮ್ಮೆಯ ವಿಷಯವಾಗಿದೆ