ಬೆಳ್ತಂಗಡಿ: ವೇಣೂರು ಅರಣ್ಯ ವಲಯದ ಪಿಲಾತಬೆಟ್ಟು ಎಂಬಲ್ಲಿ ತೋಟ ಒಂದರಲ್ಲಿ ಗಿಡಗಂಟಿಗಳ ಪೊದೆಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಿಸಿ ಸುರಕ್ಷಿತವಾದ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ.
ವೇಣೂರು ಅರಣ್ಯ ವಲಯದ ಪಿಲಾತಬೆಟ್ಟು ಎಂಬಲ್ಲಿ ಗುರುವಾರ ತೋಟವೊಂದರಲ್ಲಿ ಸುಮಾರು ಒಂದೂವರೆ ವರ್ಷ ಪ್ರಾಯದ ಹೆಣ್ಣು ಚಿರತೆ ರಬ್ಬರ್ ತೋಟದಲ್ಲಿ ಉರುಳಿನ ಹಗ್ಗದೊಂದಿಗೆ ಪೊದೆಗಳ ಮದ್ಯೆ ಸಿಲುಕಿ ಒದ್ದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಎಲ್ಲೋ ಉರುಳಿಗೆ ಬಿದ್ದಿದ್ದ ಚಿರತೆ ಉರುಳು ಸಹಿತ ಅಲ್ಲಿಂದ ಮುಂದುವರಿದು ತೋಟದ ಪೊದೆಗಳ ಮಧ್ಯೆ ಸಿಲುಕಿಕೊಂಡಿತ್ತು.
ಮೂಡಬಿದಿರೆ ಎಸಿಎಫ್ ಶ್ರೀಧರ್ ಪಿ. ಮಾರ್ಗದರ್ಶನದಲ್ಲಿ, ವೇಣೂರು ಆರ್ ಎಫ್ ಒ ಭರತ್ ಯು.ಜಿ.,ಡಿಆರ್ ಎಫ್ ಒ ಅಶ್ವಿತ್ ಗಟ್ಟಿ, ಸುನಿಲ್ ಕುಮಾರ್ ಸಿಬ್ಬಂದಿ ಸುರೇಶ ಹಾಗೂ ದಿವಾಕರ್ ಆಗಮಿಸಿ ಸ್ಥಳೀಯರ ಸಹಕಾರದಲ್ಲಿ ಚಿರತೆಯನ್ನು ರಕ್ಷಿಸಿದ್ದಾರೆ.
ವನ್ಯಜೀವಿ ವಿಭಾಗದ ಪಶು ವೈದ್ಯ ಡಾ.ಯಶಸ್ವಿ ನಾರಾವಿ ಅರಿವಳಿಕೆ ಮದ್ದು ನೀಡಿ ಉರುಳನ್ನು ತೆಗೆದು ಚಿರತೆಯನ್ನು ಬೋನಿಗೆ ಸ್ಥಳಾಂತರಿಸಲು ಸಹಕರಿಸಿದರು. ಬಳಿಕ ಚಿರತೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಕಳೆದ ವಾರ ವೇಣೂರು ಅರಣ್ಯ ವಲಯದ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ಸರಕಾರಿ ಜಾಗ ಒಂದರಲ್ಲಿ ನಾಲ್ಕರಿಂದ ಐದು ವರ್ಷ ಪ್ರಾಯದ ಹೆಣ್ಣು ಚಿರತೆಯ ಮೃತದೇಹ ಪತ್ತೆಯಾಗಿತ್ತು. ಹಾಗೂ ತಾಲೂಕಿನ ಹಲವೆಡೆ ಚಿರತೆ ಸಂಚಾರವಾಗುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂಜಾಗೃತಾ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.






