ಬೆಂಗಳೂರು: ಬಂಗಾಳಕೊಲ್ಲಿಯ ಪೂರ್ವಮಧ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತೀವ್ರ ಚಂಡಮಾರುತದ ಸ್ವರೂಪ ಪಡೆದು ಮೇ 26ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರವನ್ನು ಹಾದುಹೋಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಯುಭಾರ ಕುಸಿತವು ಚಂಡಮಾರುತವಾಗಿ ಬದಲಾಗಲೇಬೇಕು ಎಂದು ಹೇಳಲಾಗದು. ಈಗಿನ ಸೂಚನೆಯಂತೆ ಮೇ 23ರಂದು ಬೆಳಿಗ್ಗೆ ಬಂಗಾಳಕೊಲ್ಲಿಯ ಪೂರ್ವಮಧ್ಯ ಭಾಗದಲ್ಲಿ ಕೇಂದ್ರೀಕೃತಗೊಳ್ಳುವ ವಾಯುಭಾರ ಕುಸಿತ ಬಳಿಕ ಉತ್ತರ-ವಾಯವ್ಯದತ್ತ ಚಲಿಸಿ, ಮೇ 24ರ ವೇಳೆಗೆ ತೀವ್ರ ಬಿರುಗಾಳಿಯ ರೂಪ ಪಡೆಯುತ್ತದೆ. ಬಳಿಕ ಮುಂದಿನ 24 ಗಂಟೆಯ ಅವಧಿಯಲ್ಲಿ ತೀವ್ರ ಚಂಡಮಾರುತವಾಗಿ ಮಾರ್ಪಡಲಿದೆ. ಬಳಿಕ ಮುಂದುವರಿದು ಮೇ 26ರ ಸಂಜೆ ವೇಳೆಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಯನ್ನು ಹಾದುಹೋಗಲಿದೆ ಎಂದು ಇಲಾಖೆ ಹೇಳಿದೆ.
ಯಾಸ್ ಚಂಡಮಾರುತ: ಒಡಿಶಾ, ಬಂಗಾಳದಲ್ಲಿ ಕಟ್ಟೆಚ್ಚರ
ಪಶ್ಚಿಮ ಕರಾವಳಿ ತೀರದ ಪ್ರದೇಶಗಳು ತೌಕ್ತೆ ಚಂಡಮಾರುತದ ಅಬ್ಬರದಿಂದ ಚೇತರಿಸಿಕೊಳ್ಳುವ ಮೊದಲೇ ದೇಶದ ಪೂರ್ವ ಕರಾವಳಿಗೆ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. ಯಾಸ್ ಎಂಬ ಹೆಸರಿವ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಯನ್ನು ಮೇ 26ರಂದು ಹಾದುಹೋಗುವ ಸಾಧ್ಯತೆ ಇರುವುದರಿಂದ ಎರಡೂ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚಂಡ ಮಾರುತದ ಹಿನ್ನೆಲೆಯಲ್ಲಿ ಎದುರಾಗಲಿರುವ ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಆರೋಗ್ಯ ವ್ಯವಸ್ಥೆ ಹಾಗೂ ಔಷಧಗಳನ್ನು ಅಗತ್ಯದ ಪ್ರಮಾಣದಲ್ಲಿ ದಾಸ್ತಾನು ಇಡುವಂತೆ ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಂಡಮಾನ್-ನಿಕೊಬಾರ್ ದ್ವೀಪಗಳಿಗೆ ಕೇಂದ್ರ ಸರಕಾರ ಸೂಚಿಸಿದೆ.
ಒಡಿಶಾದ 30 ಜಿಲ್ಲೆಗಳ ಪೈಕಿ 14ರಲ್ಲಿ ಕಟ್ಟೆಚ್ಚರದ ಸ್ಥಿತಿ ಘೋಷಿಸಲಾಗಿದೆ. ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರುವಂತೆ ಒಡಿಶಾ ಸರಕಾರ ನೌಕಾಪಡೆ ಹಾಗೂ ತಟರಕ್ಷಕ ಪಡೆಯನ್ನು ವಿನಂತಿಸಿದೆ.
ಮುಂದಿನ ವಾರ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ 22 ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೇ ಹೇಳಿದೆ.
ಅಂಡಮಾನ್-ನಿಕೊಬಾರ್ ದ್ವೀಪಗಳಲ್ಲಿ ಹಾಗೂ ಪೂರ್ವತೀರದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳದ ತಂಡಗಳನ್ನು ನಿಯೋಜಿಸಲಾಗಿದೆ. ತೌಕ್ತೆ ಚಂಡಮಾರುತದ ಪ್ರಭಾವಕ್ಕೆ ಒಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ವಿಪತ್ತು ನಿರ್ವಹಣಾ ದಳದ ತುಕಡಿಯನ್ನು ವಾಪಾಸು ಕರೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.