ಮುಂಡಾಜೆ: ಬೆಳ್ತಂಗಡಿ ತಾಲೂಕಿನಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಗ್ರಾಮಗಳಲ್ಲಿ ಮುಂಡಾಜೆ ಗ್ರಾಮವು ಪ್ರಮುಖ ಸ್ಥಾನದಲ್ಲಿದೆ. ಮುಂಡಾಜೆ ಗ್ರಾಮದ ಸೋಮಂತಡ್ಕವು ಹಲವು ಗ್ರಾಮಗಳ ಸಂಪರ್ಕ ಕೊಂಡಿಯಾಗಿದ್ದು, ಬ್ಯಾಂಕಿಂಗ್ ಸೇವೆಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಇದರ ಪರಿಣಾಮವಾಗಿ ಈ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಹತ್ತಿರದ ಮೂಡಿಗೆರೆ ಹಾಗೂ ಚಿಕ್ಕಮಗಳೂರು ಕಡೆಗೆ ದಿನನಿತ್ಯ ಓಡಾಟ ನಡೆಸುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ, ಈ ಭಾಗದಲ್ಲಿ ರಸ್ತೆ ಸಾರಿಗೆ ಸಂಸ್ಥೆಯಿಂದ ಅಧಿಕೃತವಾಗಿ ಬಸ್ ನಿಲುಗಡೆಗೆ ಸೂಚನೆ ಇದ್ದರೂ, ಬಸ್‌ಗಳು ಇಲ್ಲಿ ನಿಲ್ಲದೆ ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಗಮನಾರ್ಹವಾಗಿದೆ.
ಈ ಕುರಿತು ಸುಮಾರು 15 ದಿನಗಳ ಹಿಂದೆ ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದು, ಅದನ್ನು ಆಧರಿಸಿ ವರದಿ ಮಾಡಲಾಗಿತ್ತು. ಬಳಿಕ ಸಮಸ್ಯೆ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ನಮ್ಮ ತಂಡ ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದಾಗ, ಅದೇ ಪರಿಸ್ಥಿತಿ ಮುಂದುವರಿದಿರುವುದು ಕಂಡುಬಂದಿತು.
ಬೆಳಿಗ್ಗೆ ಸುಮಾರು 7 ಗಂಟೆಯಿಂದ ವೇಗದೂತ ಬಸ್ ನಿಲುಗಡೆ ಬೋರ್ಡ್ ಇರುವ ಸ್ಥಳದಲ್ಲಿ ನಿಂತು ಬಸ್ ನಿಲ್ಲಿಸಲು ಸೂಚನೆ ನೀಡಿದರೂ, ಯಾವುದೇ ಬಸ್ ನಿಲ್ಲದೇ ವೇಗವಾಗಿ ಮುಂದುವರಿದವು. ಸುಬ್ರಹ್ಮಣ್ಯ–ಧರ್ಮಸ್ಥಳದಿಂದ ಬ್ಯಾಡಗಿ ಕಡೆಗೆ ಸಾಗುವ ಬಸ್, ಮಂಗಳೂರು–ಚಿಕ್ಕಮಗಳೂರು ಬಸ್ ಹಾಗೂ ಧರ್ಮಸ್ಥಳ–ಹಾವೇರಿ ಬಸ್‌ಗಳು ಕೂಡ ನಿಲುಗಡೆ ಮಾಡದೇ ಹೋಗಿರುವುದು ಕಂಡುಬಂದಿದೆ.
ಸ್ಟೇಜ್ ಸಮಸ್ಯೆಗೆ ಮುಕ್ತಿ ನೀಡಬೇಕಾದವರು ಯಾರು????
ಎಲ್ಲಾ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ಉಜಿರೆ, ಹಾಗೂ ಕಕ್ಕಿಂಜೆ ಸ್ಟೇಜ್ ಮಾತ್ರ ಕಾಣುತ್ತಿದೆ ಇದರ ಮದ್ಯೆ ಬರುವ ಮುಂಡಾಜೆ/ಸೋಮಂತ್ತಡ್ಕ ಸ್ಟೇಜ್ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಅದರಲ್ಲೂ ಧರ್ಮಸ್ಥಳ ವಿಭಾಗದ ಬಸ್ ಗಳಲ್ಲಿ ಮಾತ್ರ ಸೋಮಂತ್ತಡ್ಕ ಸ್ಟೇಜ್ ಹೆಸರಿಗೆ ಮಾತ್ರ ಇದ್ದು ಟಿಕೆಟ್ ಮಾತ್ರ ಉಜಿರೆಯ ದೂರ ವನ್ನೇ ಅವಲಂಬಿಸಿದೆ ಇದರಿಂದ ಪ್ರಯಾಣಿಕರು ಹಾಗೂ ಸಂಸ್ಥೆಯ ಸಿಬ್ಬಂದಿಗಳ ನಡುವೆ ಗೊಂದಲಕ್ಕೆ ಕಾರಣವಾಗಿದೆ. ಉಳಿದಂತೆ ಎಲ್ಲಾ ನಿಗಮದ ಬಸ್ ಗಳಲ್ಲಿ ಸೋಮಂತ್ತಡ್ಕ ಸ್ಟೇಜ್ ಮಾಯವಾಗಿದೆ. ಕೊಟ್ಟಿಗೆಹಾರ ದಾಟಿದರೆ ಸಣ್ಣ ಸಣ್ಣ ಹಳ್ಳಿಗಳ ಹೆಸರು ಕೂಡ ವೇಗದೂತ ಬಸ್ ಗಳ ಸ್ಟೇಜ್ ನಲ್ಲಿ ಸೇರ್ಪಡೆಯಾಗಿದೆ ಇದರಿಂದ ಸೋಮಂತ್ತಡ್ಕದ ಜನತೆ ಸಾರಿಗೆ ವ್ಯವಸ್ಥೆಯ ಮೇಲೆ ಇಟ್ಟ ನಂಬಿಕೆ ಹುಸಿಯಾಗತೋಡಗಿದೆ ಇನ್ನಾದರೂ ಇಲಾಖೆ ತುರ್ತು ಗಮನ ಹರಿಸಿ ಈ ದ್ವಂದ್ವ ನೀತಿ ಸರಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಚಿಂತನೆ ಮಾಡಬೇಕಾಗಿದೆ
ಸಮಸ್ಯೆ ಪರಿಹಾರಕ್ಕೆDC ಭರವಸೆ:
ಈ ಸಮಸ್ಯೆಯನ್ನು ಕುರಿತು ಪುತ್ತೂರು ವಿಭಾಗೀಯ ನಿಯಂತ್ರಕ (DC)ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, 2014ರಲ್ಲಿ ಇಲ್ಲಿ ವೇಗದೂತ ಬಸ್ ನಿಲುಗಡೆಗೆ ಅಧಿಸೂಚನೆ ಹೊರಡಿಸಿರುವುದನ್ನು ಗಮನಕ್ಕೆ ತರಲಾಗಿದ್ದು ಈ ಬಗ್ಗೆ ಚರ್ಚಿಸಿದ ಅವರು ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನೂ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆಯೇ ಎಂಬುದು ಕಾದುನೋಡಬೇಕಾಗಿದೆ.
ಎರಡು ನೂತನ ಬಸ್ ತಂಗುದಾಣಗಳು ಹೆದ್ದಾರಿ ಬದಿ ನಿರ್ಮಾಣ ಹಂತದಲ್ಲಿದೆ:
ಈಗಾಗಲೇ ಸೋಮಂತ್ತಡ್ಕ ಪೇಟೆಯಲ್ಲಿ ದೂರದೂರಿಗೆ ಹೋಗುವ ಪ್ರಯಾಣಿಕರಿಗೆ, ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ, ಹಿರಿಯ ನಾಗರೀಕರಿಗೆ ಅನುಕೂಲ ಆಗುವಂತೆ ಹೆದ್ದಾರಿಯ ಎರಡು ಬದಿಯಲ್ಲಿ ಬಸ್ ತಂಗುದಾಣದ ಕಾರ್ಯವು ಪ್ರಗತಿಯಲ್ಲಿದೆ.
ಒಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿರುವ ಮುಂಡಾಜೆ–ಸೋಮಂತಡ್ಕ ಪ್ರದೇಶವು ರಸ್ತೆ ಸಾರಿಗೆ ಸೌಲಭ್ಯಗಳ ವಿಚಾರದಲ್ಲಿ ಹಿಂದುಳಿದಿರುವುದು ವಿಷಾದನೀಯವಾಗಿದೆ.





