ಚಿಕ್ಕಮಗಳೂರು: ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕೊಂದು 200 ಎಕರೆ ಕಾಫಿ ತೋಟವನ್ನು ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ತಾಲೂಕಿನ ಹಿರೇಕೊಳಲೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ವಾಟೇಖಾನ್ ಕಾಫಿ ತೋಟದ ಮಾಲಕ ರವೇಶ್‍ರಾವ್ ಎಂಬವರು ಚಿಕ್ಕಮಗಳೂರು ಯೂನಿಯನ್ ಬ್ಯಾಂಕ್‍ನಲ್ಲಿ 22 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಸಕಾಲಕ್ಕೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಗುರುವಾರ ಸಂಜೆ ಪೊಲೀಸ್ ರಕ್ಷಣೆಯಲ್ಲಿ ತೆರಳಿ 200 ಎಕರೆ ಕಾಫಿ ತೋಟವನ್ನು ಮುಟ್ಟುಗೋಲು ಹಾಕಿ ಕೊಂಡಿದ್ದಾರೆಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಅತೀವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಿಂದ ಕಾಫಿ ಬೆಳೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದ್ದು, ಬೆಳೆಗಾರರು ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿ ಅನೇಕ ಬೆಳೆಗಾರರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಕಾಫಿ ತೋಟವನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಾಫಿತೋಟವನ್ನು ನ್ಯಾಯಾಲಯದ ಆದೇಶದ ಮೇರೆಗೆ ಯೂನಿಯನ್ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.