ನವದೆಹಲಿ : ಗರ್ಭಪಾತದ ಮಿತಿಯನ್ನು ಪ್ರಸಕ್ತ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸುವಂತೆ ಕೋರಿರುವ ಗರ್ಭಾವಸ್ಥೆ ವೈದ್ಯಕೀಯ ಮುಕ್ತಾಯ ತಿದ್ದುಪಡಿ ಮಸೂದೆ 2020ಕ್ಕೆ ರಾಜ್ಯಸಭೆ ಮಂಗಳವಾರ ಅಂಗೀಕಾರ ನೀಡಿದೆ.
ಸದನದಲ್ಲಿ ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್, ವ್ಯಾಪಕ ಸಮಾಲೋಚನೆ ನಡೆಸಿ ಈ ಮಸೂದೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಈ ಮಸೂದೆಯು ಬಹಳ ಕಾಲದಿಂದ ನಿರೀಕ್ಷಿಸಲ್ಪಟ್ಟಿದೆ ಮತ್ತು ಕಳೆದ ವರ್ಷ ಲೋಕಸಭೆಯಲ್ಲಿ ಅಂಗೀಕಾರವಾಗಿದೆ ಎಂದು ಅವರು ಹೇಳಿದರು. ಅಲ್ಲಿ ಸರ್ವಾನುಮತದಿಂದ ಮಸೂದೆಯನ್ನು ಅಂಗೀಕರಿಸಲಾಯಿತು ಎಂದು ಅವರು ಹೇಳಿದರು.
ಮಸೂದೆಯನ್ನು ಸಿದ್ಧಮಾಡುವ ಮೊದಲು ಜಗತ್ತಿನಾದ್ಯಂತ ಇರುವ ಕಾನೂನುಗಳನ್ನು ಅಧ್ಯಯನ ಮಾಡಲಾಗಿದೆ ಎಂದು ಅವರು ಹೇಳಿದರು.
ಸಚಿವರ ಉತ್ತರದ ನಂತರ ಸದನ ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಿತು. ಈ ಮೊದಲು, ಸರ್ಕಾರ ಮಂಡಿಸಿದ ತಿದ್ದುಪಡಿಗಳನ್ನು ಅಂಗೀಕರಿಸುವಾಗ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವುದು ಸೇರಿದಂತೆ ಇತರ ವಿರೋಧ ಪಕ್ಷ ತಿದ್ದುಪಡಿಗಳನ್ನು ಸದನವು ತಿರಸ್ಕರಿಸಿತು.