🖊️ ಸಂಪಾದಕೀಯ………
ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ಈ ದಿನ ಕೈಗೊಳ್ಳುವ ಎಲ್ಲಾ ಶುಭಕಾರ್ಯಗಳಿಗೆ ಯಶಸ್ಸು ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ.
ಅಕ್ಷಯ ತೃತೀಯಾದಂದು ಎಲ್ಲ ಸಮಯವು ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.
ಅಕ್ಷಯ ತೃತೀಯ ದಿವಸ ಜೀವನದ ಹೊಸ ಕೆಲಸ, ಉದ್ಯೋಗ ಪ್ರಾರಂಭ, ಚಿನ್ನಾಭರಣ ಖರೀದಿಗೆ ಶುಭದಿನ. ಈ ದಿವಸ ಸಾಮಾನ್ಯವಾಗಿ ಶುಭ ಕಾರ್ಯಗಳನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ ಪುಣ್ಯಕರ ಎಂಬುದು ಪುರಾಣದಲ್ಲಿದೆ.
ಈ ಅಕ್ಷಯ ತೃತೀಯದಂದು ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯಚ್ಛ ಪ್ರಮಾಣ ತಲುಪಿ ಉಚ್ಛರಾಶಿಯಲ್ಲಿ ಉಜ್ವಲತೆ ಉಂಟಾಗುತ್ತದೆ. ವೇದವ್ಯಾಸರು ಗಣಪತಿಯೊಂದಿಗೆ ಒಪ್ಪಂದ ಮಾಡಿಕೊಂಡು ಮಹಾಭಾರತ ಬರೆಸಲು ಪ್ರಾರಂಭಿಸಿದ್ದು ಕೂಡ ಈ ಅಕ್ಷಯ ತೃತೀಯದಂದೇ. ಚಿನ್ನ ಖರೀದಿಸಿ, ಸಾದ್ಯವಾದರೆ ದಾನ ಮಾಡಿ, ಹೊಸ ಯೋಜನೆಗಳಿಗೆ ಅಡಿಪಾಯ ಹಾಕಿ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ ಎಂಬ ನಂಬಿಕೆ ಇದೆ
ಅಕ್ಷಯ ತೃತೀಯದ ವಿಶಿಷ್ಟತೆಯೇನು?
ಅಕ್ಷಯ ತೃತೀಯವೆಂದರೆ ಗಂಗಾ ದೇವಿ ಸ್ವರ್ಗದಿಂದ ಧರೆಗಿಳಿದ ದಿನ, ಬಸವೇಶ್ವರರು ಹಾಗೂ ಪರಶುರಾಮ ಜನಿಸಿದ್ದು ಇದೇ ದಿನ, ಅಕ್ಷಯ ತೃತೀಯ ದಿನದಂದು ವಿಷ್ಣುವನ್ನು ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಎಲ್ಲರಲ್ಲಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದುರಿಂದ ಎಲ್ಲಾ ದೋಷಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ಆಸ್ತಿ, ಚಿನ್ನಾಭರಣ ಖರೀದಿಗೆ ಇಂದು ಯೋಗ್ಯ ದಿನ
ಅಕ್ಷಯ ತೃತೀಯದಂದು ಚಿನ್ನಾಭರಣ, ಭೂಮಿ ಇತ್ಯಾದಿ ಖರೀದಿ, ಹೂಡಿಕೆಗೆ ಉತ್ತವಾದ ದಿನವಾಗಿದೆ. ಜನರು ಉಳಿತಾಯ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಸಮೃದ್ಧಿಗಾಗಿ ಖರೀದಿ ಮತ್ತು ಹೂಡಿಕೆಯಲ್ಲಿ ತೊಡಗುತ್ತಾರೆ.
ದೇವತಾ ಕಾರ್ಯ ಹಾಗೂ ದಾನವನ್ನು ಮಾಡಲು ಅಕ್ಷಯ ತೃತೀಯ ತುಂಬಾ ಶ್ರೇಷ್ಠವಾದ ದಿನವಾಗಿದೆ. ಯಾರಿಗೆ ದಾನ ಮಾಡಬೇಕು ಎಂಬುದನ್ನು ಕೂಡ ತಿಳಿದುಕೊಂಡಿರಬೇಕು. ನಾವೇ ಚಿನ್ನವನ್ನು ಖರೀದಿಸಿ ನಾವೇ ತೊಟ್ಟುಕೊಳ್ಳಬೇಕೆಂದೇನು ಇಲ್ಲ, ದಾನವನ್ನು ಎಷ್ಟು ಶ್ರದ್ಧೆ, ಭಕ್ತಿಯಿಂದ ಮಾಡುತ್ತೀರೋ ಅಷ್ಟು ಯಶಸ್ಸು ನಿಮ್ಮದಾಗುತ್ತದೆ.
ನಾವು ವರ್ಷಗಳ ಕಾಲ ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಲಿ ಎನ್ನುವ ಅರ್ಥದಿಂದ ದಾನವನ್ನು ಮಾಡುತ್ತೇವೆ. ಚಿನ್ನ ಅಥವಾ ಇನ್ಯಾವುದೇ ದಾನವನ್ನು ಪಡೆಯಬೇಕಿರುವವರು ಶುದ್ಧವಾಗಿರಬೇಕು, ಪ್ರತಿನಿತ್ಯ ಜಪ-ತಪ ಇತ್ಯಾದಿಯನ್ನು ಮಾಡಿ ಪಾಪದ ಫಲಗಳನ್ನು ಹೊತ್ತು ನೀಗಿಸಿಕೊಳ್ಳುವಂತಹ ವ್ಯಕ್ತಿಯಾಗಿರಬೇಕು ಅಂಥವರಿಗೆ ನೀವು ದಾನ ಮಾಡಬೇಕು.
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ
ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಕ್ಷಯ ತೃತೀಯ, ದಿನದ ಮಹತ್ವ ಏನು, ಮಾಡಬೇಕಾದ್ದೇನು?
ಅಕ್ಷಯ ಎಂದರೆ ಕ್ಷಯವಿಲ್ಲದಿರುವುದು ಎಂದರ್ಥ ತೃತೀಯವೆಂದರೆ ವೈಶಾಖ ಮಾಸದ ಮೂರನೆಯ ದಿನ, ಅಕ್ಷಯ ತೃತೀಯದಂದು ಸಾಕಷ್ಟು ಐತಿಹಾಸಿಕ ಘಟನೆಗಳು ಸಂಭವಿಸಿದೆ. ಇಂದು ಪರಶುರಾಮನನ್ನು ನೆನೆಯಿರಿ, ಶ್ರೀಕೃಷ್ಣನ ಅವತಾರ ಪರಶುರಾಮ ಧರೆಯೊಳಗೆ ಜನಿಸಿದ ದಿನ ಇಂದು. ಈ ಅಕ್ಷಯ ತೃತೀಯದಂದು ಪಿತೃದೇವತೆಗಳ ಪ್ರೀತ್ಯರ್ಥ ಶ್ರಾದ್ಧವನ್ನೂ ಕೂಡ ಮಾಡಬಹುದು.
ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ?
ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭುವರ್ಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭುವರ್ಲೋಕದಲ್ಲಿರುವ ಬಹುತೇಕ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.
ಎಳ್ಳು ತರ್ಪಣೆ ಮಾಡುವ ಪದ್ಧತಿ:
ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು