ಹಾಸನ: ಅಂಬಾರಿ ಹೊರುತ್ತಿದ್ದ ಸಾಕಾನೆ ಅರ್ಜುನ ಕಾಡಾನೆಯೊಂದರ ದಾಳಿಗೆ ಸೋಮವಾರ ಬಲಿಯಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ಸಂದರ್ಭ ಈ ದುರಂತ ಸಂಭವಿಸಿದೆ. ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ಕಾರ್ಯ ನಡೆಸಿದ್ದಾರೆ.
ಅಂಬಾರಿ ಹೊತ್ತಿದ್ದ ಅರ್ಜುನ: 2012 ರಿಂದ 2019 ರವರೆಗಿನ ಮೈಸೂರು ದಸರಾ ಉತ್ಸವದ ಒಟ್ಟು 8 ಬಾರಿ ಅರ್ಜುನ ಆನೆ ಅಂಬಾರಿ ಹೊತ್ತಿತ್ತು. ಇದೀಗ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ಮೃತಪಟ್ಟಿದ್ದು, ಮಾವುತರು ಕಣ್ಣೀರಿಡುತ್ತಿದ್ದಾರೆ
ಸಾಕಾನೆಗಳು ಹಾಗೂ ಕಾಡಾನೆ ಮಧ್ಯೆ ಕಾಳಗ ನಡೆದಿದ್ದು, ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಇತರ ಸಾಕಾನೆಗಳು ಓಡಿ ಹೋಗಿದ್ದರೆ. ಅರ್ಜುನ ಮಾತ್ರ ಒಂಟಿಸಲಗದ ಜೊತೆ ಸೆಣಸಾಡಿತ್ತು.
ಸೋಮವಾರ ಮಧ್ಯಾಹ್ನ ಬಾಳೆಕೆರೆ ಫಾರೆಸ್ಟ್‌ನಲ್ಲಿ ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಪುಂಡಾನೆಯೊಂದು ದಾಳಿ ಮಾಡಿದೆ. ನಾಲ್ಕು ಸಾಕಾನೆಗಳ ಜೊತೆಗೆ ಅದನ್ನು ಹಿಮ್ಮೆಟ್ಟಿಸಲು ಮಾವುತರು ಪ್ರಯತ್ನಿಸಿದರು.
ಮೂರು ಆನೆಗಳು ಹಿಂದೆ ಸರಿದಿದ್ದು, ಸಾಕಾನೆ ಅರ್ಜುನನ ಮೇಲೆ ಕಾಡಾನೆ ದಾಳಿ ನಡೆಸಿದೆ. ದಾಳಿ ತೀವ್ರವಾಗುತ್ತಿದ್ದಂತೆಯೇ ಅರ್ಜುನನ ಮಾವುತರು ಕೆಳಕ್ಕೆ ಇಳಿದು ಓಡಿ ಬಂದಿದ್ದಾರೆ. ಹೊಟ್ಟೆ ಭಾಗಕ್ಕೆ ತಿವಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಸಾಕಾನೆ ಅರ್ಜುನ ಮೃತಪಟ್ಟಿದೆ.