ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂಥ್ ನೇಮಕಗೊಳ್ಳುವ ಸಾಧ್ಯತೆ!

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ನೂತನ ಆಯುಕ್ತರಾಗಿ ಕಮಲ್ ಪಂಥ್ ರನ್ನು ನೇಮಕಗೊಳಿಸುವ ಸಾಧ್ಯತೆಯಿದೆ.

ನಾಳೆ ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ ಎನ್ನಲಾಗಿದೆ.

READ ALSO

ಆಗಸ್ಟ್ 2 ಕ್ಕೆ ಭಾಸ್ಕರ್ ರಾವ್ ಅವರ ಒಂದು ವರ್ಷ ಅವಧಿ ಮುಗಿಯುವುದರಿಂದ ಕಮಲ್ ಪಂಥ್ ನೇಮಕ ಮಾಡುವ ಸಾಧ್ಯತೆ ಇದೆಯೆಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಭಾಸ್ಕರ್ ರಾವ್ ಅವರ ಸ್ಥಾನಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿ ಕಮಲ್ ಪಂಥ್ ನೇಮಕಗೊಳ್ಳುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಭಾಸ್ಕರ್ ರಾವ್ ಮತ್ತು ಕಮಲ್ ಪಂಥ್ 1990 ರ ಐಪಿಎಸ್ ಬ್ಯಾಚ್ ನವರಾಗಿದ್ದಾರೆ.

ನಗರ ಪೊಲೀಸ್ ಆಯುಕ್ತ ಹುದ್ದೆಗೆ ಮೂವರು ಅಧಿಕಾರಿಗಳು ಮುಂಚೂಣಿಯಲ್ಲಿದ್ದರು, ಪಂಥ್ ಅವರ ಜೊತೆಗೆ ಸುನೀಲ್ ಅಗರ್ ವಾಲ್ ಮತ್ತು ಅಮೃತ್ ಪೌಲ್ ಕೂಡ ಆಕಾಂಕ್ಷಿಗಳಾಗಿದ್ದರು. ಅಮೃತ್ ಪೌಲ್ ರವರನ್ನು ಇದೇ ವರ್ಷದ ಜನವರಿ ಅಂತ್ಯದಲ್ಲಿ ಎಡಿಜಿಪಿಯಾಗಿ ಬಡ್ತಿ ನೀಡಲಾಗಿತ್ತು. ಕಮಿಷನರ್ ಅವರ ಜೊತೆಗೆ ನಗರದ ಮತ್ತಷ್ಟು ಹಿರಿಯ ಅಧಿಕಾರಿಗಳ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಪಿ.ಎಸ್. ಸಂಧು (1989) ಆಗಸ್ಟ್ 1 ರಂದು ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಬಡ್ತಿ ಪಡೆಯಲಿದ್ದಾರೆ.