‘ಭಾಗ್ಯಲಕ್ಷ್ಮಿ’ ಯೋಜನೆಯಲ್ಲಿ ಬದಲಾವಣೆ! ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆ ಯೋಜನೆಯಾದ ಭಾಗ್ಯಲಕ್ಷ್ಮಿ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಬದಲು ಸುಕನ್ಯಾ ಸಮೃದ್ಧಿ ಯೋಜನೆಯಡಿ ಅಂಚೆ ಇಲಾಖೆ ಮೂಲಕ ಮುಂದುವರಿಸಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.

ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

READ ALSO

ಇನ್ನು ಎಲ್‌ಐಸಿ ಬದಲು ಅಂಚೆ ಇಲಾಖೆ ಯೋಜನೆಯ ಏಜೆನ್ಸಿಯಾಗಲಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ 1 ಲಕ್ಷ ರು. ಲಭ್ಯವಾಗುತ್ತಿತ್ತು. ಆದರೆ, ಯೋಜನೆಯನ್ನು ಮರು ವಿನ್ಯಾಸಗೊಳಿಸಿರುವ ಕಾರಣ 21 ವರ್ಷಕ್ಕೆ ಬಾಂಡ್‌ ಮೆಚ್ಯೂರಿಟಿಯಾಗಲಿದೆ. 18 ವರ್ಷದ ಬಳಿಕ ಯೋಜನೆಯ ಅರ್ಧ ಮೊತ್ತವನ್ನು ಪಡೆಯಲು ಫಲಾನುಭವಿ ಅರ್ಹರಾಗಿರುತ್ತಾರೆ

ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಎಲ್‌ಐಸಿ, ಬಾಂಡ್‌ ಮೆಚ್ಯೂರಿಟಿಯಾದ ಬಳಿಕ 1 ಲಕ್ಷ ರು. ಪಾವತಿ ಮಾಡಲು ತಕಾರರು ಮಾಡಿತ್ತು. ಕಡಿಮೆ ಬಡ್ಡಿದರ ಇರುವ ಕಾರಣ ಕಡಿಮೆಯಾಗುವ ಮೊತ್ತವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯ ಮಾಡಿತ್ತು. ಸರ್ಕಾರವು ಒಮ್ಮೆ ಪ್ರತಿ ಮಗುವಿಗೆ 19,300 ರು. ಪಾವತಿಸುತ್ತಿತ್ತು. ಬಾಂಡ್‌ ಮೆಚ್ಯೂರಿಟಿಯಾದ ನಂತರ 1 ಲಕ್ಷ ರು. ಎಲ್‌ಐಸಿ ನೀಡಬೇಕಾಗಿತ್ತು. ಇದಕ್ಕೆ ತಕರಾರು ಮಾಡಿದ ಎಲ್‌ಐಸಿ, ಸರ್ಕಾರವು ಒಂದು ಮಗುವಿಗೆ 30 ಸಾವಿರ ರು. ಪಾವತಿಸಬೇಕು. ಇಲ್ಲದಿದ್ದರೆ 1 ಲಕ್ಷ ರು. ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ವರ್ಗಾಯಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರವು ಪ್ರತಿ ಮಗುವಿಗೆ ವರ್ಷಕ್ಕೆ 3 ಸಾವಿರ ರು.ನಂತೆ 15 ವರ್ಷಗಳ ಕಾಲ ಪಾವತಿಸಲಿದೆ. ಫಲಾನುಭವಿಗಳಿಗೆ 21 ವರ್ಷವಾದಾಗ 1.27 ಲಕ್ಷ ಮುಕ್ತಾಯ ಹಣ ಬರಲಿದೆ. ಒಂದು ವೇಳೆ ಫಲಾನುಭವಿಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ನಂತರದ ಶಿಕ್ಷಣಕ್ಕೆ ಹಣ ಬೇಕಿದ್ದರೆ ಆ ಹಣವನ್ನು ವಿತ್ ‌ಡ್ರಾ ಮಾಡಿಕೊಳ್ಳಲು ಅವಕಾಶ ಇದೆ