ಬೆಳ್ತಂಗಡಿಯ ನಡ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿಯಲ್ಲಿ ‘ನಿಧಿ ರಹಸ್ಯ’ ವದಂತಿ! ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳ ಭೇಟಿ!

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಡ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿ ಗ್ರಾಮದ ಪಣೆತ್ತಡಿ ಆನಂದ ಶೆಟ್ಟಿ ಎಂಬವರ ಜಮೀನಿನಲ್ಲಿ ನಿಧಿ ಲಭಿಸಿರುವ ಬಗ್ಗೆ ವದಂತಿ‌ ಸೃಷ್ಟಿಯಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಆನಂದ ಶೆಟ್ಟಿ ಅವರಿಗೆ ನಿಧಿ ಲಭಿಸಿತ್ತು ಇದೀಗ ಅವರು ನಿಧಿ ಸಿಕ್ಕಿದ ಜಾಗವನ್ನು ಸಮತಟ್ಟು ಮಾಡಿದ್ದಾರೆ ಎಂದು ಸ್ಥಳೀಯರು ವಿಡಿಯೋ ಮಾಡಿ ಎಸಿ ಯವರಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದ್ದು, ಇದೀಗ ತಹಶೀಲ್ದಾರ್ ಸಮ್ಮುಖದಲ್ಲಿ ಬುಧವಾರ ನಿಧಿ ಶೋಧಕ್ಕೆ‌ ಸಿದ್ಧತೆಗಳು ನಡೆಯುತ್ತಿದ್ದು ಬೆಳ್ತಂಗಡಿ ಎಸ್.ಐ. ನಂದಕುಮಾರ್, ನಡ ಗ್ರಾ.ಪಂ. ಗ್ರಾಮ ಲೆಕ್ಕಿಗ ಅಧಿಕಾರಿಗಳು ಸ್ಥಳದಲ್ಲಿ ಜಮಾಯಿಸಿದ್ದಾರೆ.

READ ALSO

ಸ್ಥಳದಲ್ಲಿ ತಾಳೆಮರವಿದ್ದು, ಅದನ್ನು ತೆರವುಗೊಳಿಸುವಾಗ ಮಣ್ಣು ಕುಸಿತಗೊಂಡಿದ್ದು ಯಾವುದೇ ನಿಧಿ ಇಲ್ಲ ಎಂದು ಜಮೀನಿನ ಯಜಮಾನ ತಿಳಿಸಿದ್ದಾರೆ.

ತಹಶೀಲ್ದಾರ್‌ ಮಹೇಶ್ ಜೆ. ಸಮ್ಮುಖದಲ್ಲಿ‌ ನಿಧಿ ಶೋಧಕ್ಕೆ‌ ಕಾರ್ಯ ನಡೆಯುತ್ತಿದ್ದು ಘಟನಾ ಸ್ಥಳದಲ್ಲಿ ರಹಸ್ಯ ನಿಧಿ ಶೋಧ ನೋಡಲು ಊರಿನ ಜನ ಜಮಾಯಿಸಿದ್ದಾರೆ.

ರಹಸ್ಯ ಕಾರ್ಯಾಚರಣೆ ಮುಗಿದಿದ್ದು ನಿಧಿಯ ಯಾವುದೇ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬರಿಗೈಯಲ್ಲಿ ವಾಪಾಸಾಗಿದ್ದಾರೆ ಎಂದು ತಿಳಿದು ಬಂದಿದೆ.