ಚಾರ್ಮಾಡಿ: ಮಂಗಳೂರು – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-73ರ ರಸ್ತೆಯ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಮಳೆಗಾಲದ ಸಂಧರ್ಭದಲ್ಲಿ ಉಂಟಾದ ರಸ್ತೆ ಹಾನಿ ಸಮಸ್ಯೆಯನ್ನು ಪರಿಗಣಿಸಿ ಘನ ವಾಹನ ಸಂಚಾರ ಸಂಪೂರ್ಣ ನಿಷೇಧ ಮಾಡಲಾಗಿದ್ದು ಇದೀಗ 18ತಿಂಗಳ ಬಳಿಕ ಈ ಆದೇಶದಲ್ಲಿ ಸಡಿಲಿಕೆ ಮಾಡಿ ಲಘು ಹಾಗೂ ಕೆಲವು ಘನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವ ಬಗ್ಗೆ ಹಾಗೂ ಈ ಆದೇಶವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.
ಈ ಆದೇಶದಂತೆ ಪ್ರಸ್ತಾಪಿತ ಮಾರ್ಗದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಹಾಸನರವರು ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸತಕ್ಕದ್ದು ಹಾಗೂ ಈ ಮಾರ್ಗದಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಚಾರ್ಮಾಡಿ ಘಾಟ್ ಭಾಗದಲ್ಲಿ ಬಹಳಷ್ಟು ಕಡೆ ಭೂಕುಸಿತದಿಂದ ರಸ್ತೆಗೆ ತೀವ್ರತರವಾದ ಧಕ್ಕೆ ಉಂಟಾಗಿರುವುದರಿಂದ ಅತ್ಯಂತ ಜಾಗರೂಕತೆಯಿಂದ ನಿಗದಿತ ವೇಗದ ಮಿತಿಯೊಂದಿಗೆ ವಾಹನಗಳು ಸಂಚರಿಸುವುದು.
ಸಂಚರಿಸಬಹುದಾದ ಲಘು ವಾಹನಗಳಾದ ಕೆ.ಎಸ್.ಆರ್.ಟಿ.ಸಿ ಕೆಂಪು ಬಸ್, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೊ ಟ್ರಾವೆಲರ್, ಅಂಬುಲೆನ್ಸ್, ಕಾರು, ಜೀಪು, ವ್ಯಾನ್, ಎಲ್.ಸಿ.ವಿ (ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ನಿರ್ಬಂಧಿಸಲಾದ ಬಾರಿ ಘನ ವಾಹನಗಳಾದ ಬುಲೆಟ್ ಟ್ಯಾಂಕರ್, ಶಿಫ್ಟ್ ಕಾರ್ಗೊ ಕಂಟೈನರ್ಸ್ ಹಾಗೂ ಲಾಂಗ್ ಚಾಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್ ಟೇಲರ್, ಕೆ.ಎಸ್.ಆರ್.ಟಿ.ಸಿ ರಾಜ ಹಂಸ ಬಸ್ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.