ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸೀಲ್ ಡೌನ್ ಆಗಿದ್ದ 16 ಮನೆಯವರು ಸೇರಿ ಗಿಡ ನೆಟ್ಟು ಕೊರೊನಾ ಮುಕ್ತರಾಗಿದ್ದೇವೆ ಎಂಬ ಸಂದೇಶ ಸಾರುವ ಮೂಲಕ ಮಾದರಿ ಕಾರ್ಯಕ್ರಮ ಮಾಡಿ ಗಮನ ಸೆಳೆದಿದ್ದಾರೆ.
ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿ, ಪಡ್ಲಾಡಿಯ ಬಡಾವಣೆಯೊಂದರ 16 ಮನೆಗಳಿರುವ ಈ ಕಾಲನಿಯ 12 ಮನೆಗಳ ಸುಮಾರು 36 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಈ ಪ್ರದೇಶವನ್ನು ಮೇ 20ರಂದು ಸೀಲ್ ಡೌನ್ ಮಾಡಲಾಗಿತ್ತು. 17 ದಿನಗಳ ಬಳಿಕ ಸೀಲ್ ಡೌನ್ ತೆರವುಗೊಳಿಸಲಾಗಿದೆ ಅದಕ್ಕಾಗಿ ಜೂ. 5 ವಿಶ್ವ ಪರಿಸರ ದಿನಾಚರಣೆ ದಿನದಂದು ಪರಿಸರದವರೆಲ್ಲರೂ ಸೇರಿ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಇವರ ಮಾರ್ಗದರ್ಶನದಲ್ಲಿ ಪಕ್ಕದ ಸ್ಮಶಾನದ ಸುತ್ತಮುತ್ತ ಹಣ್ಣು ಹಾಗೂ ಇತರ ಗಿಡಗಳನ್ನು ಪ್ರತೀ ಮನೆಗೊಂದರಂತೆ ನೆಟ್ಟು ನಾವು ಕೊರೊನಾ ಮುಕ್ತರಾಗಿದ್ದೇವೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾ.ಪಂ. ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಕಳೆದ 17 ದಿನಗಳ ಹಿಂದೆ ಸೀಲ್ ಡೌನ್ ಆಗಿದ್ದ ಈ ಪ್ರದೇಶದ ಎಲ್ಲರೂ ಕೊರೊನಾ ಮುಕ್ತರಾಗಿ ಹೊರಬಂದಿದ್ದಾರೆ. ಕಂಟೋನ್ಮೇಂಟ್ ಝೋನ್ ತೆರವಾಗಿದೆ ಜೂ. 5 ವಿಶ್ವ ಪರಿಸರ ದಿನದಂದು ಸಮಾಜಕ್ಕೆ ಮಾದರಿಯಾಗುವಂತಹ ಸಂದೇಶವನ್ನು ನೀಡಬೇಕು ಎಂಬ ಯೋಚನೆಯಲ್ಲಿ ಸಸಿ ನೆಟ್ಟು ಕೊರೊನಾ ಗೆದ್ದ ಸಂಭ್ರಮವನ್ನು ಆಚರಿಸಿಕೊಳ್ಳಬೇಕು ಎಂಬ ಯೋಚನೆಯಂತೆ ಇಂದು, ನಾವೆಲ್ಲರೂ ಸೇರಿ ಒಂದು ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿರುವುದಲ್ಲದೆ ಪರಿಸರವನ್ನು ರಕ್ಷಿಸಿ ಮರಗಿಡಗಳನ್ನು ಪೋಷಿಸಿ ಎಂಬ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಹತ್ತಿರದಲ್ಲೇ ಇರುವ ಸ್ಮಶಾನ ಹಾಗೂ ಪರಿಸರದ ಸುತ್ತಮುತ್ತ ಹಣ್ಣಿನ ಹಾಗೂ ಇತರ ಕೆಲವು ಗಿಡಗಳನ್ನು ನೆಡುವ ಬಗ್ಗೆ ಕಾರ್ಯಕ್ರಮ ಮಾಡಿದ್ದೇವೆ .16 ಮನೆಯವರು ಸೇರಿಕೊಂಡು ಗಿಡ ನೆಟ್ಟು ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂಬುವುದನ್ನು ಸಾರಿದ್ದಾರೆ ಅದಲ್ಲದೆ ಈ ಗಿಡಗಳನ್ನು ಎಚ್ಚರಿಕೆಯಿಂದ ಪೋಷಿಸಬೇಕು ಎಂಬ ಮನವಿಗೆ ಸ್ಥಳೀಯರು ಸಂತೋಷದಿಂದ ಒಪ್ಪಿ ಎಲ್ಲರೂ ಸೇರಿಕೊಂಡು ವಿಶೇಷ ರೀತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಶುಭ ದಿನದಂದು ತಮ್ಮ ಪರಿಸರವನ್ನು ಕೊರೊನಾ ಮುಕ್ತ ಪಡ್ಲಾಡಿ ಎಂಬ ಸಂದೇಶವನ್ನು ಗಿಡ ನೆಡುವ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರಲ್ಲಿ ಗಿಡ ನೀಡುವ ಬಗ್ಗೆ ಮನವಿ ಮಾಡಿದಾಗ ಸಂತೋಷದಿಂದ ಒಪ್ಪಿ ಗಿಡ ನೀಡಿದ್ದಾರೆ ಅದಲ್ಲದೆ ಸಹಕರಿಸಿದ ಅರಣ್ಯಪಾಲಕ ರಾಘವೇಂದ್ರ ಪ್ರಸಾದ್ ಇವರಿಗೂ ಧನ್ಯವಾದಗಳು. ಸೀಲ್ ಡೌನ್ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾದ ನಮ್ಮ ಪಡ್ಲಾಡಿಯ ಕೆಲವರನ್ನು ಆಸ್ಪತ್ರೆಗೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಉಚಿತವಾಗಿ ಅಂಬುಲೆನ್ಸ್ ಸೇವೆ ನೀಡಿದ ನಮ್ಮಶಾಸಕರ “ಶ್ರಮಿಕ ಸ್ಪಂದನಾ” ತಂಡಕ್ಕೆ , ಪ್ರತಿದಿನ ಆರೋಗ್ಯದ ಮಾಹಿತಿ ಗಮನಿಸುತಿದ್ದ ಆರೋಗ್ಯ ಸಹಾಯಕಿಯರಿಗೆ ಆಹಾರ ಕಿಟ್ ನೀಡಿದ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೆ ವಾರ್ಡಿನ ಪರವಾಗಿ ಧನ್ಯವಾದಗಳು ಎಂದರು.
ಸ್ಥಳೀಯ ನಿವಾಸಿ ಯಮುನಾ ಅನಿಸಿಕೆ ವ್ಯಕ್ತಪಡಿಸಿ ಪಡ್ಲಾಡಿಯಲ್ಲಿ ಮಾದರಿ ಕಾರ್ಯಕ್ರಮ ಇವತ್ತು ವಿಶ್ವ ಪರಿಸರ ದಿನಾಚರಣೆಯ ಈ ಶುಭ ದಿನದಂದು ಮಾಡುತಿದ್ದೇವೆ ಇದನ್ನು ಆಯೋಜಿಸಿದ ನಮ್ಮ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಸಾದ್ ಶೆಟ್ಟಿಯವರಿಗೆ ಅಭಿನಂದನೆಗಳು. ಒಳ್ಳೆಯ ಗಾಳಿ ಸ್ವಚ್ಚ ಪರಿಸರದಿಂದ ಆರೋಗ್ಯ ಉತ್ತಮವಾಗಿರಲು ಸಾಧ್ಯ ಮುಂದೆಯೂ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.
ವಿನಯ್ ಪಡ್ಲಾಡಿ ಈ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಸೀಲ್ ಡೌನ್ ದಿನಗಳಿಂದ ನಮ್ಮ ಪಡ್ಲಾಡಿ ಜನರ ಎಲ್ಲ ಕಷ್ಟಗಳಿಗೆ ನೋವುಗಳಿಗೆ ಸ್ಪಂದಿಸಿ ಸದಾ ನಮ್ಮೊಂದಿಗಿದ್ದ ನಮ್ಮ ವಾರ್ಡಿನ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಇವರಿಗೆ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ನೀಡಿ ಎಲ್ಲ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಪಡ್ಲಾಡಿ ಜನತೆಯ ಪರವಾಗಿ ಧನ್ಯವಾದಗಳು ಎಂದರು. ಈ ಸಂದರ್ಭದಲ್ಲಿ ಕೋವಿಡ್ ಕಾರ್ಯಪಡೆಯ ಅನಿಲ್ ವಿಕ್ರಂ ಡಿಸೋಜ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು ಕೊನೆಯಲ್ಲಿ ಎಲ್ಲ ಮನೆಯವರಿಗೆ ಸಿಹಿ ಹಂಚಲಾಯಿತು.